ಸಾರಾಂಶ
ಹುಬ್ಬಳ್ಳಿ: ಬಿಜೆಪಿ ವಕ್ಫ್, ಸಂವಿಧಾನ ತಿರುಚುವ ಪ್ರಚಾರ, ದೇಶದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಇಂಥ ಗೊಂದಲಗಳಿಗೆ ಉತ್ತರ ನೀಡುವುದಕ್ಕಾಗಿ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶದ ಮೂಲಕ ಉತ್ತರ ನೀಡಲಿದ್ದೇವೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ಸ್ವಾಭಿಮಾನಿ ಸಮಾವೇಶಕ್ಕೆ ಸಂಬಂಧಪಟ್ಟಂತೆ ಅನಾಮಧೇಯ ಪತ್ರ ಬರೆದಿದ್ದಾರೆ ಎಂದು ಹೇಳುತ್ತಿದ್ದೀರಿ. ಅದನ್ನು ಯಾರೋ ಸೃಷ್ಟಿಸುತ್ತಿದ್ದಾರೆ ಅಷ್ಟೇ. ನಾವು ಅದನ್ನು ಒಪ್ಪುವುದಿಲ್ಲ ಎಂದರು.ಕಾಂಗ್ರೆಸ್ ಪಕ್ಷವೇ ಮುಂದಾಳತ್ವ ವಹಿಸಿಕೊಂಡು ಯಶಸ್ವಿಯಾಗಿ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನ ಪಟ್ಟರೆ ಅದನ್ನು ಗಟ್ಟಿಯಾಗಿ ಎದುರಿಸುತ್ತೇವೆ. ಈ ಎಲ್ಲದಕ್ಕೂ ಉತ್ತರ ನೀಡಬೇಕು. ಅದನ್ನು ಹಾಸನ ಸಮಾವೇಶದ ಮೂಲಕ ನೀಡುತ್ತೇವೆ ಎಂದರು.
ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ಗೆದ್ದಿದ್ದೇವೆ. ಈ ಮೂಲಕ ಬಿಜೆಪಿಗೆ ಕಪಾಳ ಮೋಕ್ಷ ಆಗಿದೆ ಎಂದರು.ಯತ್ನಾಳ ಅವರು ಸಿಎಂ ಸಿದ್ದರಾಮಯ್ಯ ಪರವಾಗಿ ಹೇಳಿಕೆ ನೀಡುತ್ತಿದ್ದಾರಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ ಎಲ್ಲರನ್ನು ಟೀಕೆ ಮಾಡಿದ್ದಾರೆ. ನಮ್ಮ ಪಕ್ಷದ ಮುಖ್ಯಮಂತ್ರಿಗಳನ್ನು ಟೀಕಿಸಿದ್ದಾರೆ. ಅವರ ಪಕ್ಷವನ್ನೂ ಟೀಕಿಸಿದ್ದುಂಟು. ಹಾಗಂತ ನಮ್ಮ ಮುಖ್ಯಮಂತ್ರಿ ಪರವಾಗಿದ್ದಾರೆ ಎಂಬುದು ಸುಳ್ಳು. ಇದೆಲ್ಲ ಬಿಜೆಪಿಯವರು ಯತ್ನಾಳ ಅವರನ್ನು ವೀಕ್ ಮಾಡಲು ಮಾಡುತ್ತಿರುವ ಹೇಳಿಕೆ ಅಷ್ಟೇ. ಸಿದ್ದರಾಮಯ್ಯ ಅವರನ್ನು ವೀಕ್ ಮಾಡಲು ಯತ್ನಿಸಿದರು. ಇದೀಗ ಯತ್ನಾಳ ಅವರನ್ನು ವೀಕ್ ಮಾಡಲು ಬಳಸುತ್ತಿರುವ ತಂತ್ರಗಾರಿಕೆ ಅಷ್ಟೇ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮೂಲ, ವಲಸಿಗ ಎಂಬ ಚರ್ಚೆ ಶುರುವಾಗಿದೆಯಲ್ಲ ಎಂಬ ಪ್ರಶ್ನೆಗೆ ಕಾಂಗ್ರೆಸ್‌ನಲ್ಲಿ ನನಗಿಂತ ಮೂಲ ಎಲ್ಲಿಯಾದರೂ ಇದೆಯಾ? ನಾನು ಮೂಲ ಕಾಂಗ್ರೆಸ್ಸಿಗ. ನನಗೆ ಗೊತ್ತಿಲ್ಲದಂತೆ ಚರ್ಚೆಯಾಗುತ್ತಿದೆಯೇ? ಎಲ್ಲೂ ಚರ್ಚೆಯಾಗುತ್ತಿಲ್ಲ ಎಂದರು.ಹಿರಿಯರ ತ್ಯಾಗ
ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆ. ಹಿರಿಯರು ತ್ಯಾಗ ಮಾಡಬೇಕಂತೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಹಾಗೊಂದು ತೀರ್ಮಾನ ಕೈಗೊಂಡರೆ ಹಿರಿಯರೇ ಇರಲಿ, ಕಿರಿಯರೇ ಇರಲಿ ತ್ಯಾಗ ಮಾಡಲೇಬೇಕು. ಪಕ್ಷ ನಿರ್ಣಯ ಹೇಗೆ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಷ್ಟೇ. ಪಕ್ಷಕ್ಕೆ, ಸರ್ಕಾರಕ್ಕೆ ಉತ್ತಮವಾಗಿರುವಂತಹ ಇಮೇಜ್ ಕೊಡುವ ದೃಷ್ಟಿಯಿಂದ ಏನೇ ನಿರ್ಣಯ ಕೈಗೊಂಡರೂ ಅದಕ್ಕೆ ಎಲ್ಲರೂ ಒಪ್ಪಬೇಕು ಎಂದರು.ಸಿಎಂ ಬದಲಾವಣೆ
ಸಿಎಂ ಬದಲಾವಣೆಯಾಗುವ ಕುರಿತು ಬಿ.ಆರ್.ಪಾಟೀಲ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾಟೀಲ ಅವರು ಪ್ರಬುದ್ಧ ರಾಜಕಾರಣಿ. ಸಿಎಂ ಸಲಹೆಗಾರರು ಅವರು. ಆದರೆ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಜತೆಗೆ ಆ ಮಾತನ್ನು ನಾನು ಒಪ್ಪುವುದೂ ಇಲ್ಲ. ಸಾರ್ವಜನಿಕವಾಗಿ ಚರ್ಚೆ ಮಾಡಲು ಇಷ್ಟ ಪಡುವುದಿಲ್ಲ ಎಂದರು.ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ಅನುಮತಿ ಕೋರಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ತಪ್ಪು ನಿರ್ಣಯ ಕೈಗೊಂಡಿದ್ದರು. ಆಗ ಅಬ್ರಾಹಂ ಎನ್ನುವವರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಲು ನಿರಾಕರಣೆ ಮಾಡಿದ್ದರು. ಅದು ಸರಿಯಾದ ನಿರ್ಣಯವಲ್ಲ. ಅದನ್ನು ಪುನರ್ ಪರಿಶೀಲಿಸಿ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ. ಇದರಲ್ಲೇನು ದ್ವೇಷ ರಾಜಕಾರಣ ಬರಲ್ಲ ಎಂದರು.
ನನಗೆ ಗೊತ್ತಿಲ್ಲಮುಖ್ಯಮಂತ್ರಿ ಸ್ಥಾನದ ಕುರಿತು ಎರಡೂವರೆ ವರ್ಷದ ಒಪ್ಪಂದ ಆಗಿದೆಯಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ, ಈ ಮಾತುಕತೆಯ ಬಗ್ಗೆ ನನಗೇನು ಗೊತ್ತಿಲ್ಲ. ಆ ಮಾತುಕತೆ ವೇಳೆ ನಾನು ಅಲ್ಲಿ ಇರಲಿಲ್ಲ. ಹೀಗಾಗಿ ಆ ಬಗ್ಗೆಏನು ಗೊತ್ತಿಲ್ಲ ಎಂದರು. ನೀವು ಸಿಎಂ ಆಗಬೇಕು ಎಂಬುದು ಉತ್ತರ ಕರ್ನಾಟಕದ ಜನರ ಆಶಯ ಎಂಬ ಪ್ರಶ್ನೆಗೆ, ನನ್ನ ಮೇಲೆ ನೀವಿಟ್ಟಿರುವ ಅಭಿಮಾನ, ವಿಶ್ವಾಸ, ಗೌರವಕ್ಕೆ ಕೃತಜ್ಞತೆಗಳು ಎಂದಷ್ಟೇ ಹೇಳಿದರು.
ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ ಕೇಂದ್ರದಿಂದ ₹100 ಕೋಟಿ: ಎಚ್ಕೆಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹100 ಕೋಟಿ ಹಣವನ್ನು ಮಂಜೂರು ಮಾಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ರಚನೆಯಾದಾಗಿನಿಂದಲೂ ಯಲ್ಲಮ್ಮನಗುಡ್ಡದ ಅಭಿವೃದ್ಧಿಗಾಗಿ ಕೇಂದ್ರದಿಂದ ಅನುದಾನ ನೀಡುವಂತೆ ಕೇಳಲಾಗುತ್ತಿತ್ತು. ಈ ಬಗ್ಗೆ ಹಲವು ಬಾರಿ ಪತ್ರ ಕೂಡ ಬರೆಯಲಾಗಿತ್ತು. ಇದೀಗ ಕೇಂದ್ರ ಸರ್ಕಾರ ₹100 ಕೋಟಿ ನೀಡುತ್ತಿದೆ ಎಂದರು.ಯಲ್ಲಮ್ಮನ ಗುಡ್ಡಕ್ಕೆ ಪ್ರತಿವರ್ಷ 1.25 ಕೋಟಿ ಭಕ್ತಾಧಿಗಳು ಭೇಟಿ ನೀಡುತ್ತಾರೆ. ಈಗಾಗಲೇ ರಾಜ್ಯ ಸರ್ಕಾರದಿಂದ ಯಾತ್ರಿಗಳ ಅನುಕೂಲಕ್ಕಾಗಿ ಮುಖ್ಯಮಂತ್ರಿಗಳಿಂದ ₹25 ಕೋಟಿ ಮೌಲ್ಯದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. ಕೆಲ ಅಭಿವೃದ್ಧಿ ಕೆಲಸಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಪ್ರಾಧಿಕಾರವನ್ನು ಮಾಡಿದ್ದೇವೆ. ಹಲವಾರು ಅಭಿವೃದ್ಧಿ ಕೆಲಸಗಳಿಗೆ ಪ್ರಾಧಿಕಾರದ ಸಭೆಯಲ್ಲೇ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ತಿಳಿಸಲಾಗಿದೆ ಎಂದರು.
ಇದೀಗ ಕೇಂದ್ರ ಸರ್ಕಾರ ₹100 ಕೋಟಿ ಹಣ ಬಿಡುಗಡೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಕೆಲಸಗಳಿಗೆ ಈ ಮೊತ್ತ ಸಹಕಾರಿಯಾಗಲಿದೆ. ಇದೇ ಮೊದಲ ಬಾರಿಗೆ ಕೇಂದ್ರದಿಂದ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೆ ಅನುದಾನ ಬಂದಿರುವುದು. ಇದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವರಿಗೆ ಧನ್ಯವಾದ ತಿಳಿಸುತ್ತೇವೆ ಎಂದರು.ಯಲ್ಲಮ್ಮನಗುಡ್ಡದಲ್ಲಿ 3 ಸಾವಿರ ಜನ ಏಕಕಾಲಕ್ಕೆ ಕುಳಿತು ಊಟ ಮಾಡುವಂತಹ ದಾಸೋಹ ಭವನ ನಿರ್ಮಾಣ ಮಾಡಬೇಕೆಂಬ ಯೋಜನೆ ಇದೆ. ಅದಕ್ಕೆ ಈ ತಿಂಗಳಲ್ಲಿ ಶಂಕು ಸ್ಥಾಪನೆ ನೆರವೇರಿಸುತ್ತೇವೆ ಎಂದರು.ಜತೆಗೆ ಭಕ್ತರು ಯಲ್ಲಮನ ಗುಡ್ಡಕ್ಕೆ ಚಕ್ಕಡಿ ತೆಗೆದುಕೊಂಡು ಹೋಗುವುದು ವಾಡಿಕೆ. ಭಕ್ತರಿಗೆ ದಾಸೋಹ ನೀಡಿದಂತೆ ಎತ್ತು ಸೇರಿದಂತೆ ಪ್ರಾಣಿಗಳಿಗೂ ಮೇವು ಹೊಟ್ಟು ನೀಡುವ ವ್ಯವಸ್ಥೆ ಮಾಡುವ ನಿರ್ಣಯ ಕೈಗೊಂಡಿದ್ದೇವೆ ಎಂದು ನುಡಿದರು.