ಸಿದ್ಧಾಂತ, ಬರವಣಿಗೆ ಆದಾಗ ಮಾತ್ರ ಎಲ್ಲದಕ್ಕೂ ಉತ್ತರ: ಡಾ.ಲೋಕೇಶ ಅಗಸನಕಟ್ಟೆ

| Published : Mar 04 2024, 01:19 AM IST

ಸಿದ್ಧಾಂತ, ಬರವಣಿಗೆ ಆದಾಗ ಮಾತ್ರ ಎಲ್ಲದಕ್ಕೂ ಉತ್ತರ: ಡಾ.ಲೋಕೇಶ ಅಗಸನಕಟ್ಟೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಪತ್ರಕರ್ತರ ಭವನದಲ್ಲಿ ಭಾನುವಾರ ಲುಂಬಿನಿ ಪ್ರಕಾಶನ, ಅಂಬೇಡ್ಕರ್‌ ವಿಚಾರ ವೇದಿಕೆಯಿಂದ ಆಯೋಜಿಸಿದ್ದ ಜನಾರ್ಪಣೆ ಸಮಾರಂಭದಲ್ಲಿ ಅಶೋಕ ಅಗಿಲ್‌ ಅವರ ‘ನದಿಯ ಹುಡುಕಾಟ’ ಹಾಗೂ ಎಸ್‌.ಕೆ.ಮಂಜುನಾಥ್‌ ಅವರ ‘ಗಾಳಿಯ ಎದೆ ಸೀಳಿ ಹೊರಟ ಹಕ್ಕಿ’ ಕೃತಿಗಳನ್ನು ವಿಮರ್ಶಕ ಡಾ.ಲೋಕೇಶ ಅಗಸನಕಟ್ಟೆ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಸ್ತುತ ಸಂಕೀರ್ಣ ಸನ್ನಿವೇಶಗಳಲ್ಲಿ ಸಿಲುಕಿ ಮನುಷ್ಯ ತೊಳಲಾಡುತ್ತಿದ್ದಾನೆ. ಅಪಮೌಲ್ಯಗಳನ್ನು ಮೌಲ್ಯಗಳೆಂದು ಹಾಗೂ ಮೌಲ್ಯಗಳನ್ನು ಅಪಮೌಲ್ಯಗಳೆಂದು ನಂಬಿ ಬದುಕಿದ್ದಾನೆ. ಹಾಗಾಗಿ ಸರಳವಾಗಿ ಸಾಗಬೇಕಿದ್ದ ಬದುಕು ಕಗ್ಗಂಟ್ಟಾಗಿದೆ. ನನ್ನ ಸಿದ್ದಾಂತ, ನನ್ನ ಬರವಣಿಗೆ ಆದಾಗ ಮಾತ್ರ ಈ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಕವಿ ಹಾಗೂ ವಿಮರ್ಶಕ ಡಾ.ಲೋಕೇಶ ಅಗಸನಕಟ್ಟೆ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಲುಂಬಿನಿ ಪ್ರಕಾಶನ, ಅಂಬೇಡ್ಕರ್‌ ವಿಚಾರ ವೇದಿಕೆಯಿಂದ ಆಯೋಜಿಸಿದ್ದ ಜನಾರ್ಪಣೆ ಸಮಾರಂಭದಲ್ಲಿ ಅಶೋಕ ಅಗಿಲ್‌ ಅವರ ‘ನದಿಯ ಹುಡುಕಾಟ’ ಹಾಗೂ ಎಸ್‌.ಕೆ.ಮಂಜುನಾಥ್‌ ಅವರ ‘ಗಾಳಿಯ ಎದೆ ಸೀಳಿ ಹೊರಟ ಹಕ್ಕಿ’ ಕೃತಿ ಬಿಡುಗಡೆಗೊಳಿಸಿ ಮಾತ ನಾಡಿದ ಅವರು ಕವಿ ತನ್ನನ್ನು ತಾನು ಮೀರಬೇಕು. ಪರಿಶ್ರಮ, ಧ್ಯಾನ, ಚಿಂತನೆ ಬರಹಗಾರನಿಗೆ ಬಹಳ ಮುಖ್ಯ. ಈ ಮೂರು ಅಂಶಗಳು ಸಂಧಿಸಿದಾಗ ಮಾತ್ರ ಸಾಹಿತ್ಯ ಓದುಗನ ಅನುಭವಕ್ಕೆ ಬಂದು ಸದಾ ಸ್ಮರಣೀಯವಾಗುತ್ತದೆ ಎಂದರು.‘ಬಿಕ್ಕಟ್ಟಿನ ಕಾಲಘಟ್ಟದಲ್ಲಿ ನಂಬಿಕೆ ಮತ್ತು ವೇದಾಂತದ ಸಿದ್ಧಾಂತ ಸಂಘರ್ಷಕ್ಕೆ ಸಿಲುಕಿದ್ದೇವೆ. ನಂಬಿಕೆ ಅರ್ಹವಲ್ಲದ ಸಿದ್ಧಾಂತವನ್ನು ಕುರುಡಾಗಿ ನಂಬುತ್ತಿದ್ದೇವೆ. ಪ್ರತಿಯೊಬ್ಬರ ಮಾತು ರಾಜಕೀಯ ಪ್ರೇರಿತವಾಗುತ್ತಿವೆ. ಇಂತಹ ದಿನದಲ್ಲಿ ಮನುಷ್ಯನನ್ನು ಹುಡುಕುವ ಕಾಯಕ ಸದ್ದಿಲ್ಲದೆ ಸಾಗುತ್ತಿದೆ. ತಲ್ಲಣ, ಬಿಕ್ಕಟ್ಟು, ಆತಂಕದ ವಿಷಮ ಸ್ಥಿತಿಯಲ್ಲಿ ಬರವಣಿಗೆ ಆರಂಭ ಬಹು ದೊಡ್ಡ ಸವಾಲಾಗಿದೆ. ನಮ್ಮನ್ನು ನಾನು ಪ್ರಶ್ನೆ ಮಾಡಿಕೊಳ್ಳುತ್ತಾ ಸಮಾಜಮುಖಿ ಚಿಂತನೆಯ ಹಾದಿಯಲ್ಲಿ ಬರಹ ಸಾಗಬೇಕಿದೆ. ಸಾಹಿತ್ಯದ ವಿಚಾರದಲ್ಲಿ ಸಂಗತಿ ಮೇಲಿನ ಕಳಕಳಿ ಹಾಗೂ ಪ್ರೀತಿಯಿಂದ ನಮ್ಮ ಕೆಲಸ ಮಾಡಿ ಮುಗಿಸಬೇಕು. ನಾವು ಬರೆದ ಸಂಗತಿಯನ್ನು ಜನರು ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ಬಳಿಕ ನಿರ್ಧಾರವಾಗುತ್ತದೆ ಎಂದರು.

ಬುದ್ದ, ಬಸವ ಅಂಬೇಡ್ಕರ್‌ ಸೇರಿದಂತೆ ಹಲವು ಮಹನೀಯರು ಜಾತಿಯಲ ಸಂಕೋಲೆ ಮೀರಿ ಜಗತ್ತಿಗೆ ಏಕತೆಯ ಸಂದೇಶ ಸಾರಿದ್ದರು. ಜತೆಗೆ ನಮ್ಮನ್ನು ಜಾತಿಗೆ ಸಿಲುಕಿಸಬೇಡಿ ಎಂದು ಹೇಳಿದ್ದರು. ಪ್ರಸ್ತುತ ಪ್ರತಿಯೊಬ್ಬರನ್ನು ಜಾತಿಗೆ ಸೀಮಿತಗೊಳಿಸಿ ಅವರ ಆಶಯಕ್ಕೆ ದಕ್ಕೆತರುವ ಕೆಲಸ ಮಾಡಲಾಗುತ್ತಿದೆ. ಕಾವ್ಯ ಸದಾ ಪ್ರಸ್ತುತವಾಗಿರಬೇಕು. ಮನುಷ್ಯನ ಪರವಾಗಿ ಉಸಿರಾಡಬೇಕು. ತನ್ನ ತನವನ್ನು ಕಳೆದುಕೊಂಡು ಗತಕಾಲಕ್ಕೆ ಸರಿಯಬಾರದು. ಕವಿತೆಯ ಸಾಲು ವಿವರಣೆಯಿಲ್ಲದೆ ಆನಂದದಿಂದ ಮನಸ್ಸಿನ ಅಂತರಾಳಕ್ಕೆ ಸರಾಗವಾಗಿ ಇಳಿಯಬೇಕು. ಸಂಕೀರ್ಣತೆಯಿಂದ ಕೂಡಿರಬಾರದು ಎಂದು ಸಲಹೆ ನೀಡಿದರು.

ಪ್ರೊ.ಬಿ.ಎಲ್‌.ರಾಜು, ಉಜ್ಜಿನಪ್ಪ, ಕವಿಗಳಾದ ಬಿ.ಎಂ.ಗುರುನಾಥ್‌, ಆನಂದ ಋಗ್ವೇದಿ, ಸಹಾಯಕ ಪ್ರಾಧ್ಯಾಪಕ ಕೆ.ಚಂದ್ರಪ್ಪ, ರಂಗನಿರ್ದೇಶಕ ಧೀಮಂತರಾಮ್‌, ಉಪನ್ಯಾಸಕ ಎಂ.ವೇದಾಂತ ಏಳಂಜಿ ಇದ್ದರು.