ಸಾರಾಂಶ
ಪ್ರತಿನಿತ್ಯ ನಮ್ಮ ನಡುವೆ ನಡೆಯುವ ಸುದ್ದಿ ಘಟನೆಗಳನ್ನ ಕ್ಷಣಮಾತ್ರದಲ್ಲಿ ಪ್ರಚುರಪಡಿಸುವಂತಹ ವ್ಯವಸ್ಥೆಗಳನ್ನು ಇಂದಿನ ಮಾಧ್ಯಮಗಳು ಹೊಂದಿದ್ದು ಸಮಾಜದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವರು ಪತ್ರಕರ್ತರೇ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಅವರು ತಿಳಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಪ್ರತಿನಿತ್ಯ ನಮ್ಮ ನಡುವೆ ನಡೆಯುವ ಸುದ್ದಿ ಘಟನೆಗಳನ್ನ ಕ್ಷಣಮಾತ್ರದಲ್ಲಿ ಪ್ರಚುರಪಡಿಸುವಂತಹ ವ್ಯವಸ್ಥೆಗಳನ್ನು ಇಂದಿನ ಮಾಧ್ಯಮಗಳು ಹೊಂದಿದ್ದು ಸಮಾಜದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವರು ಪತ್ರಕರ್ತರೇ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಅವರು ತಿಳಿಸಿದರು.ತುಮಕೂರು ನಗರದ ಕುಣಿಗಲ್ ರಸ್ತೆಯ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ಆವರಣದಲ್ಲಿ ಜನವರಿ 18 ಮತ್ತು 19ರಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನ ನಡೆಯುವ ಕುರಿತಾಗಿ ವೇದಿಕೆ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿ ನಂತರ ಮಾತನಾಡಿದರು.
ಮಾಧ್ಯಮ ಕ್ಷೇತ್ರ ಅನೇಕ ಸರ್ಕಾರಗಳ ಕಣ್ಣು ತೆರೆಸಿದಂತಹ ಶಕ್ತಿಯನ್ನು ಹೊಂದಿದ್ದು ಅದೇ ರೀತಿಯಾಗಿ ಈ ಕಾಲಮಾನದ ಪತ್ರಕರ್ತರು ಅನೇಕ ಜ್ವಲಂತ ಸಮಸ್ಯೆಗಳನ್ನು ಕೂಡಾ ಎದುರಿಸುತ್ತಿದ್ದಾರೆ ಈ ನಡುವೆ ಎಲ್ಲ ವಿಚಾರಗಳನ್ನ ಒಂದೆಡೆ ಸೇರಿ ಚರ್ಚೆ ನಡೆಸಲು ಪತ್ರಕರ್ತರು ತಮ್ಮ ಸಂಘದ ವತಿಯಿಂದ ರಾಜ್ಯಮಟ್ಟದ ವಿಶೇಷ ಸಮ್ಮೇಳನವನ್ನ ನಮ್ಮ ಕಲ್ಪತರು ನಾಡಿನಲ್ಲಿ ನಡೆಸುತ್ತಿರುವುದು ಹೆಮ್ಮೆಯ ವಿಚಾರವೆಂದು ತಿಳಿಸಿದರು.ಜನವರಿ 18ರಂದು ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದು ಈ ಸಮ್ಮೇಳನಕ್ಕೆ ದೇಶ ಹಾಗೂ ರಾಜ್ಯದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಪತ್ರಕರ್ತರ ಸ್ನೇಹಿತರು ಆಗಮಿಸಲಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಗೆ ಆಗಮಿಸುವ ಎಲ್ಲಾ ಪತ್ರಕರ್ತರಿಗೂ ಆತ್ಮೀಯವಾಗಿ ಸ್ವಾಗತವನ್ನು ಕೋರಲಿದ್ದೇನೆ ಎಂದು ತಿಳಿಸಿದರು.
ಪತ್ರಕರ್ತರ ಸಮ್ಮೇಳನ ಕೇವಲ ಸಮ್ಮೇಳನ ವಾಗಿ ಉಳಿಯದೆ ತುಮಕೂರಿಗೆ ರಾಜ್ಯದಿಂದ ಮೊದಲ ಬಾರಿಗೆ ಆಗಮಿಸುವ ವಿವಿಧ ಜಿಲ್ಲೆಗಳ ಪತ್ರಕರ್ತರುಗಳನ್ನು ಸ್ಥಳೀಯವಾಗಿ ಇರುವ ಸ್ಥಳಗಳನ್ನ ಪರಿಚಯಿಸುವ ಕೆಲಸ ಮಾಡಬೇಕು ಸಮ್ಮೇಳನದಲ್ಲಿ ನಡೆಯುವ ವಿಚಾರಗೋಷ್ಠಿಗಳು ಸಮಾಜದ ಕಣ್ಣು ತೆರೆಸುವಂತಹ ದೋಸ್ತಿಗಳಾಗಬೇಕು ಪತ್ರಕರ್ತರಿಗೆ ಸುದ್ದಿಗಳನ್ನು ಬರೆಯಲು ಉತ್ತೇಜನ ನೀಡುವಂತಹ ಸಮ್ಮೇಳನ ಇದು ಆಗಬೇಕು ಎಂದು ಆಶಿಸಿದರು.ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕ ತುಮಕೂರು ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾ.ನಿ.ಪ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್, ಉಪಾಧ್ಯಕ್ಷ ಚಿಕ್ಕೀರಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸಂಚಾಲಕರಾದ ಅನು ಶಾಂತಕುಮಾರ್, ಸದಸ್ಯರಾದ ಟಿ.ಎನ್. ಮಧುಕರ್, ಸಂಘದ ನಿರ್ದೇಶಕರುಗಳಾದ ಪರಮೇಶ್, ಜಯನುಡಿ ಜಯಣ್ಣ, ಕಾಗ್ಗೆರೆ ಸುರೇಶ್, ರೇಣುಕ ಪ್ರಸಾದ್, ಹರೀಶ್ ಆಚಾರ್ಯ, ರವಿಕುಮಾರ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್, ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ್, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ ಮುದ್ದೇಶ್, ಇಂಜಿನಿಯರಿಂಗ್ ವಿಭಾಗದ ಎಸ್ಟೇಟ್ ಅಧಿಕಾರಿ ಶಿವರಾಜ್ ಇತರರು ಉಪಸ್ಥಿತರಿದ್ದರು.