ಸಾರಾಂಶ
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಯೋಜನೆಗಳ 11,130 ಕೋಟಿ ರು. ಗ್ಯಾರೆಂಟಿಗಳಿಗಾಗಿ ವಿನಿಯೋಗಿಸುತ್ತಿದೆ. ಇದು ಈ ಸಮುದಾಯಗಳ ಜನರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ.
ಕನ್ನಡಪ್ರಭ ವಾರ್ತೆ ಶಹಾಪುರ
ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ದಲಿತ ಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ ಮತ್ತು ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಬಿಟ್ಟಿ ಭಾಗ್ಯಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಶುಕ್ರವಾರ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಯೋಜನೆಗಳ 11,130 ಕೋಟಿ ರು. ಗ್ಯಾರೆಂಟಿಗಳಿಗಾಗಿ ವಿನಿಯೋಗಿಸುತ್ತಿದೆ. ಇದು ಈ ಸಮುದಾಯಗಳ ಜನರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ರೈತರಿಗೆ ಬರ ಪರಿಹಾರ ನೀಡದೆ, ಅಭಿವೃದ್ಧಿ ವಿರೋಧಿ, ಜನ ವಿರೋಧಿ ಸರ್ಕಾರವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಿಗೆ ಅನುದಾನ ನೀಡುವ ವಿಚಾರದಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಶಾಸಕರಿಗೆ 25 ಕೋಟಿ ರು. ಅನುದಾನ ನೀಡಿ, ಬಿಜೆಪಿ ಶಾಸಕರಿಗೆ ಏನೂ ಕೊಡದ ಬೇಜವಾಬ್ದಾರಿ ಸರ್ಕಾರ. ರೈತರಿಗೂ ಏನೂ ಕೊಡದೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ ಸರ್ಕಾರ ಜನರ ಹಣ ಲೂಟಿ ಮಾಡುತ್ತಿದೆ ಎಂದು ದೂರಿದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಆಡಳಿತ ದಲಿತ ಸಮಾಜದ ವಿಚಾರದಲ್ಲಿ ಕೇವಲ ಬಾಯಿ ಮಾತಿನಲ್ಲಿ ಕಾಳಜಿ ತೋರಿ ದಲಿತರನ್ನು ವಂಚಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರು. ಹಣವನ್ನು ವೆಚ್ಚಮಾಡಲು ಮಾತ್ರ ಯಾವ ಗ್ಯಾರಂಟಿಯೂ ಅಡ್ಡಿ ಬಂದಿಲ್ಲ. ಇವರಿಗೆ ದಲಿತರ ಹಿತಾಸಕ್ತಿಗಿಂತ ವೋಟ್ ಬ್ಯಾಂಕ್ ರಾಜಕಾರಣವು ಸರ್ಕಾರಕ್ಕೆ ಆದ್ಯತೆಯಾಗಿರುವದು ಶೋಚನೀಯ ಸಂಗತಿ ಎಂದರು.
ಗ್ರಾಮೀಣ ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ ಮಾತನಾಡಿದರು. ಹಿರಿಯ ಮುಖಂಡ ಶಿವರಾಜ್ ದೇಶಮುಖ್, ಮಲ್ಲಿಕಾರ್ಜುನ ಚಿಲ್ಲಾಳ, ಗುರು ಕಾಮಾ, ಮಲ್ಲಿಕಾರ್ಜುನ ಕಂದಕೂರ, ಸೋಪಣ್ಣ ಸಗರ, ರಾಘವೇಂದ್ರ ಯಕ್ಷಂತಿ, ಡಾ.ಚಂದ್ರಶೇಖರ ಚೌಧರಿ, ಉಮೇಶ, ಮಹಾಮನಿ, ಚಂದ್ರಶೇಖರ ಯಾಳಗಿ, ಸಿದ್ದಯ್ಯ ಸ್ವಾಮಿ ಹಿರೇಮಠ, ಸತೀಶ ತೊನ್ಸಳ್ಳಿ, ಚಂದ್ರಶೇಖರ ಯಾಳಗಿ, ಮಲ್ಲಿನಾಥ ಬಡಿಗೇರ, ಪ್ರಭು ದೊಡ್ಡಮನಿ, ಶಿವಕುಮಾರ್ ಸಗರ್, ಶರಣು ಟೋಕಪುರ, ಲಕ್ಷ್ಮೀಕಾಂತ್ ಬಿರಾಳ, ಸಂಗಣ್ಣ ಕುಂಬಾರ, ರಾಜು ಪಂಚಬಾವಿ, ವಿರೇಶ ಸುರಪುರಕರ್, ವಿಶ್ವನಾಥ ಗೌಡಗಾಂವ ಇತರರಿದ್ದರು.