ಇದು ಸಾವಿನ ದಾರಿ ಸಮೀಪ ಮಾಡುತ್ತದೆ. ಶುದ್ಧ ಗಾಳಿ, ಶುದ್ಧ ನೀರು ನಮ್ಮ ಹಕ್ಕು ಎಂದು ಕೇಳಲು ಯಾರಪ್ಪನ ಅನುಮತಿಯೂ ಬೇಕಾಗಿಲ್ಲ

ಕೊಪ್ಪಳ: ಕಾರ್ಖಾನೆ ವಿರೋಧಿ ಹೋರಾಟ ವಿಧಾನಸೌಧವರೆಗೆ ವಿಸ್ತರಣೆ ಆಗಲಿ ಎಂದು ರಾಜ್ಯದ ಖ್ಯಾತ ಹೃದಯರೋಗ ತಜ್ಞ ವೈದ್ಯ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದರು.

ನಗರದ ನಗರಸಭೆ ಮುಂದೆ 69ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಕಾರ್ಖಾನೆ ತೊಲಗಿಸಿ ಎಂಬ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಅವರು, ಜೀವ ಉಳಿದಿದೆ ಎಂದರೆ ಗಾಳಿ ಉಸಿರಾಡುತ್ತಿದ್ದೇವೆ ಎಂದರ್ಥ, ಗಾಳಿ ಇಲ್ಲದಿದ್ದರೆ ಕ್ಷಣಾರ್ಧದಲ್ಲಿ ಜೀವ ಹಾರಿ ಹೋಗುತ್ತದೆ. ಆ ಗಾಳಿ ಮಲಿನವಾದರೆ ಅದನ್ನು ಸೇವಿಸಿದ ಜನರಿಗೆ ನಿಧಾನವಾಗಿ ಸಾವು ಸಂಭವಿಸುತ್ತದೆ. ಇದು ಸಾವಿನ ದಾರಿ ಸಮೀಪ ಮಾಡುತ್ತದೆ. ಶುದ್ಧ ಗಾಳಿ, ಶುದ್ಧ ನೀರು ನಮ್ಮ ಹಕ್ಕು ಎಂದು ಕೇಳಲು ಯಾರಪ್ಪನ ಅನುಮತಿಯೂ ಬೇಕಾಗಿಲ್ಲ. ಇದನ್ನು ಕಸಿದುಕೊಳ್ಳುವ ಪ್ರಯತ್ನ ಯಾವ ಸರ್ಕಾರವೂ ಮಾಡಬಾರದು. ಜನರು ಸಹಿಸಿಕೊಂಡಿದ್ದಾರೆ ಎಂದರೆ ಸರ್ಕಾರ ಏನು ಬೇಕಾದರೂ ಮಾಡಬಹುದೇ? ಜನ ಪ್ರತಿನಿಧಿಗಳು ಇಲ್ಲಿನ ಜನರ ಆತಂಕ ದೂರ ಮಾಡಿ, ಕಣ್ಣೀರು ಒರೆಸುವುದು ಆದ್ಯ ಕರ್ತವ್ಯವೆಂದು ತಿಳಿಯಬೇಕು. ಲಕ್ಷಗಟ್ಟಲೆ ಜನರ ಆರೋಗ್ಯ ಕೆಡಿಸುವ ಹಕ್ಕು ಯಾವ ಕಾರ್ಖಾನೆಗೂ ಇಲ್ಲ. ನಾನು ಇಲ್ಲಿನ ಹಳ್ಳಿ ಜನರ ಗೋಳು ಕೇಳಿದ್ದೇನೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲ, ಭೂಮಿ ಕಬಳಿಸಿ, ವಾತಾವರಣ ಹಾಳು ಮಾಡಿದ್ದು ಇದರ ಪುನರುಜ್ಜೀವನ ಯಾರು ಮಾಡಿ ಕೊಡುತ್ತಾರೆ. ಇವರು ಕೆಡಿಸಲಷ್ಟೇ ಇರುವವರೇ? ಈ ಹೋರಾಟ ಇಲ್ಲಿಂದ ವಿಧಾನಸೌಧದವರೆಗೆ ವಿಸ್ತರಣೆ ಆಗಬೇಕು. ಕಾನೂನು ಹೋರಾಟ ಸಾಧ್ಯವಾದರೆ ಯೋಚಿಸಿ, ಅದಕ್ಕೆ ನಾಡಿನ ಖ್ಯಾತನಾಮರನ್ನು ಹೋರಾಟಕ್ಕೆ ಸೇರಿಸುತ್ತೇನೆ, ಗಟ್ಟಿಯಾಗಿ ನಿಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಕಾಶಕ ಡಿ.ಎಂ. ಬಡಿಗೇರ್, ಸಾಹಿತಿ ಎ.ಎಂ. ಮದರಿ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಶ್ವೇತಾ ಅಕ್ಕಿ, ಜ್ಯೋತಿ ಎಂ. ಗೊಂಡಬಾಳ, ಕೃಷಿ ಬೆಲೆ ಆಯೋಗದ ಸದಸ್ಯರು ಡಿ.ಎಚ್.ಪೂಜಾರ, ಸೌಮ್ಯ ನಾಲ್ವಾಡ, ಶರಣು ಗಡ್ಡಿ, ಎಸ್.ಬಿ.ರಾಜೂರು, ಹನುಮಂತಪ್ಪ ಗೊಂದಿ, ನಿವೃತ್ತ ಪ್ರಾಚಾರ್ಯ ವೈ.ಬಿ.ಬಂಡಿ, ರವಿ ಕಾಂತನವರ, ಶಾಂತಯ್ಯ ಅಂಗಡಿ, ಬಿ.ಜಿ. ಕರಿಗಾರ, ಚಂದ್ರಗೌಡ ಪಾಟೀಲ್, ಮಹಾದೇವಪ್ಪ ಎಸ್.ಮಾವಿನಮಡು, ಶಿವಪ್ಪ ಜಲ್ಲಿ, ಬಸವರಾಜ ನರೇಗಲ್, ಮಕ್ಬುಲ್ ರಾಯಚೂರು, ಪಾಮಣ್ಣ ಕೆ.ಮಲ್ಲಾಪುರ, ಭೀಮಪ್ಪ ಯಲಬುರ್ಗಾ, ನೀರಲಗಿ ಮುಂತಾದವರು ಪಾಲ್ಗೊಂಡರು.