ಕನ್ನಡಪ್ರಭ ವಾರ್ತೆ ಸಕಲೇಶಪುರ
ಹಿಂದೂ ವಿರೋಧಿ ರಾಜಕಾರಣಿಗಳಿಗೆ ಭವಿಷ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಮಹಿಪಾಲ್ ಹೇಳಿದರು.ಗುರುವಾರ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಹಿತರಕ್ಷಣಾ ವೇದಿಕೆ ಹಿಂದೂಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುತ್ತ ರಾಜಕೀಯ ಮಾಡಿದ ಬಿಹಾರದ ಲಾಲುಪ್ರಸಾದ್ ಯಾದವ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಹಿಂದೂಗಳು ಜಾಗೃತರಾಗಿರುವುದೇ ಕಾರಣ. ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಲು ಹಿಂದೂ ವಿರೋಧಿ ರಾಜಕಾರಣಿಗಳ ಬೆಂಬಲವೇ ಕಾರಣ, ಇಂದು ಹಿಂದೂಗಳು ಜಾಗೃತರಾಗಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದರೂ ಪಟ್ಟಣದಲ್ಲಿ ಗೋಹತ್ಯೆ ನಿಲ್ಲದಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದರೂ ಪೊಲೀಸರು ಕೈಕಟ್ಟಿ ಕುಳಿತ್ತಿದ್ದರೆ ಇದಕ್ಕೆಲ್ಲ ಹಿಂದೂ ವಿರೋಧಿ ರಾಜಕಾರಣಿಗಳ ಬೆಂಬಲವೇ ಕಾರಣ ಎಂದು ಹೇಳಿದರು.ಮತಾಂತರ ಎಂಬುದು ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ತಡೆಯಬೇಕಿರುವ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಹಿಂದೂಗಳೇ ಅಲ್ಪಸಂಖ್ಯಾತರಾಗುವುದರಲ್ಲಿ ಅನುಮಾನವಿಲ್ಲ. ತಾಲೂಕಿನಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆ ಮಿತಿ ಮೀರಿದೆ. ಕಾರ್ಮಿಕರ ಕೊರತೆ ಕಾರಣ ಕಾಫಿ ಬೆಳೆಗಾರರರು ಇವರನ್ನು ಮುಚ್ಚಿಟ್ಟು ಪೋಷಿಸುತ್ತಿದ್ದಾರೆ, ಇವರ ವರ್ತನೆ ಹೀಗೆ ಮುಂದುವರಿದರೆ ಮುಂದೊಂದು ದಿನ ತಾಲೂಕು ಪಶ್ಚಿಮ ಬಂಗಾಳದಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಪರಿಸ್ಥಿತಿ ಉದಯಿಸದಂತೆ ತಡೆಯ ಬೇಕಾದರೆ ನಿರ್ದಾಕ್ಷಿಣ್ಯವಾಗಿ ಇಲ್ಲಿರುವ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ವಾಪಸ್ಸು ಕಳುಹಿಸಬೇಕಿದೆ. ಹಿಂದೂಗಳ ಪೂಜಿಸುವ ಗೋವುಗಳ ಹತ್ಯೆ ಹೀಗೆ ಮುಂದುವರಿದರೆ ಮತ್ತಷ್ಟು ಉಗ್ರವಾಗಿ ಪ್ರತಿಭಟಿಸುವ ಅನಿವಾರ್ಯತೆ ಎದುರಾಗಲಿದೆ, ಆದ್ದರಿಂದ ಪೊಲೀಸರು ಇಂತಹವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂದೂ ಹಿತರಕ್ಷಣಾ ಸಮಿತಿ ಮುಖಂಡ ರಘು ಮಾತನಾಡಿ, ಉತ್ತರ ಪ್ರದೇಶದಲ್ಲಿ ೧೪ ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿರುವುದು ಖಂಡನೀಯ. ಈ ತೀರ್ಪನ್ನು ವಾಪಸ್ಸು ಪಡೆಯಬೇಕು. ಕಾನೂನಿನಲ್ಲಿ ಗೋಭಕ್ಷಕರಿಗೆ ಇರುವ ರಕ್ಷಣೆ ಗೋರಕ್ಷಕರಿಗೆ ಇಲ್ಲದಾಗಿರುವುದು ನಮ್ಮ ದೇಶದ ದುರಂತವಾಗಿದೆ ಎಂದರು.ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಹಳೇ ಬಸ್ ನಿಲ್ದಾಣದಲ್ಲಿ ಸಭೆ ನಡೆಸಿ, ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟಿಸಿದ ಪ್ರತಿಭಟನಕಾರರು, ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಹಲ್ಲಮನಿ ತಿಮ್ಮಣ್ಣನವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್, ಆರ್‌ಎಸ್‌ಎಸ್ ಮುಖಂಡರಾದ ಸತ್ಯ ನಾರಾಯಣ ಗುಪ್ತ, ಕರಡಿಗಾಲ ಹರೀಶ್, ನಂದನ್ ಸೇರಿ ಹಲವರು ಉಪಸ್ಥಿತರಿದ್ದರು.