ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಶ್ರೀರಾಮ ಮಂದಿರ ಈ ದೇಶದ ಅಸ್ಮಿತೆ, ಆದರೆ ಮಂದಿರ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ನಿಲುವು ತಳೆದಿದ್ದು, ಶಾಲೆಗಳಿಗೆ ಸರ್ಕಾರಿ ರಜೆ ನೀಡದೆ ನಮ್ಮ ಭಾವನೆಗಳಿಗೆ ಧಕ್ಕೆ ತಂದಿದೆ. ಇದೀಗ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಸದಂತೆ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ದಶಕಗಳ ಹೋರಾಟದ ಫಲ ವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಕಾಂಗ್ರೆಸ್ಸಿಗರು ಮುಸ್ಲಿಂರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಯಾರನ್ನು ಮೆಚ್ಚಿಸಲು ಇಂತಹ ನಿರ್ಧಾರಗಳನ್ನು ಕೈಗೊಂಡಿದೆ ಎಂಬುದು ಸ್ಪಷ್ಟವಾಗಿದೆ. ಪಕ್ಷದಲ್ಲಿನ ಹಿಂದೂ ಮುಖಂಡರು ಪಕ್ಷದ ವರಿಷ್ಠರಿಗೆ ಕಿವಿಹಿಂಡಿ ಬುದ್ಧಿ ಹೇಳುವ ಕೆಲಸ ಮಾಡಬೇಕು. ಇಲ್ಲದಿದ್ದರೇ ನಿಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ಹಿಂದೂಗಳೇ ಇನ್ನಾದರೂ ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದರು.ಬೆಳಗಾವಿಯಲ್ಲಿ ದಲಿತ ಮಹಿಳೆ ಮೇಲೆ ಅಮಾನವೀಯವಾಗಿ ವರ್ತಿಸಿ ಘಟನೆ ನಡೆಯಿತು. ಹಾನಗಲ್ಲನಲ್ಲಿ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಮಾಸುವ ಮುನ್ನವೇ ಕಳೆದೆರೆಡು ದಿನಗಳ ಹಿಂದಷ್ಟೇ ಹಿಂದೂ ಯುವಕ ಅಲ್ಪಸಂಖ್ಯಾತ ಮಹಿಳೆಯನ್ನು ಬೈಕ್‌ಮೇಲೆ ಕೆರೆದುಕೊಂಡು ಬಂದಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಲಾಗಿದ್ದು, ಹಿಂದೂ ಯುವಕನಿಗೆ ಜೀವ ಬೆದರಿಕೆ ಹಾಕಲಾಗಿದೆ, ಇಷ್ಟಾದರು ಸಹ ಪೋಲಿಸ್ ಇಲಾಖೆ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು ಇನ್ನೂ ಕೆಲ ಆರೋಪಿಗಳನ್ನು ಇಂದಿಗೂ ಬಂಧಿಸಿಲ್ಲ ಎಂದರು.
ಭೀಕರ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಸಮರ್ಪಕವಾಗಿ ಪರಿಹಾರದ ಹಣ ಇಂದಿಗೂ ಬಂದಿಲ್ಲ. ಕೂಲಿಕಾರ್ಮಿಕರು ಕೆಲಸವಿಲ್ಲದೇ ಪರದಾಡುವಂತಾಗಿದೆ. ಉಚಿತ ಯೋಜನೆಗಳನ್ನು ಕೊಟ್ಟಂತೆ ನಟಿಸಿ ಇನ್ನೊಂದೆಡೆ ಅಧಿಕ ತೆರಿಗೆ ವಸೂಲಿ ಮಾಡುವ ಮೂಲಕ ಸರ್ಕಾರ ಮೋಸವೆಸಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆ ನಡೆದಿದ್ದು, ವಿದ್ಯುತ್ ಸಂಪರ್ಕಗಳ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದರೂ ನ್ಯಾಯ ದೊರಕಿಸಿ ಕೊಟ್ಟಿಲ್ಲ ಸರ್ಕಾರದ ವಿರುದ್ಧ ಶೀಘ್ರದಲ್ಲೇ ತಾಲೂಕು ಮಟ್ಟದಲ್ಲಿ ಬಹುದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಈ ವೇಳೆ ಪುರಸಭೆ ಸದಸ್ಯ ಚಂದ್ರಣ್ಣ ಶೆಟ್ಟರ, ಶಿವಬಸಪ್ಪ ಕುಳೇನೂರು, ವೀರೇಂದ್ರ ಶೆಟ್ಟರ, ಸುರೇಶ ಉದ್ಯೋಗಣ್ಣನವರ, ಈರಣ್ಣ ಅಕ್ಕಿ, ವಿಷ್ಣುಕಾಂತ ಬೆನ್ನೂರು ಇತರರಿದ್ದರು.