ಸಾರಾಂಶ
ಮಂಗಳೂರು : ಅಧಿಕಾರಕ್ಕೆ ಬಂದ ಕೇವಲ ನೂರು ದಿನಗಳಲ್ಲೇ ಆಡಳಿತ ವಿರೋಧಿ ಅಲೆಗೆ ಸಿದ್ದರಾಮಯ್ಯ ಸರ್ಕಾರ ಗುರಿಯಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಗ್ಯಾರಂಟಿ ಯೋಜನೆಗಳನ್ನು ಕೊಡಬೇಡಿ ಎನ್ನಲ್ಲ. ಆದರೆ ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲಾಗದೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳ್ಳಹಿಡಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಟೀಕಿಸಿದರು.
ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಮೋಸ ಆಗುತ್ತಿದೆ ಎಂದು ಸಿಎಂ ಸುಳ್ಳು ಹೇಳುತ್ತಿದ್ದಾರೆ. 2014ರ ಮೊದಲು ತೆರಿಗೆ ರೂಪದಲ್ಲಿ ಕೇವಲ 28 ಸಾವಿರ ಕೋಟಿ ರು. ಕರ್ನಾಟಕಕ್ಕೆ ಕೊಡಲಾಗಿದೆ. 2014- 24ರ ಅವಧಿಯಲ್ಲಿ 2,80,000 ಕೋಟಿ ರು. ಹಣ ನೀಡಲಾಗಿದೆ. ಹೀಗಿದ್ದರೂ ಹಿಂದಿ ವಿಚಾರ, ಕರ್ನಾಟಕದ ಅಸ್ಮಿತೆ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಟೀಕೆ ಮಾಡುತ್ತಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಸುಳ್ಳು ಪ್ರಣಾಳಿಕೆ:
ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸುತ್ತಿರುವುದೇ ಕೇವಲ 200 ಕ್ಷೇತ್ರಗಳಲ್ಲಿ. ಆ ಎಲ್ಲ ಕ್ಷೇತ್ರಗಳಲ್ಲಿ ಗೆದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದರೂ ಪ್ರತಿ ಮಹಿಳೆಗೂ ವರ್ಷಕ್ಕೆ 1 ಲಕ್ಷ ರು. ಕೊಡುತ್ತೇವೆ ಎಂದು ಹೇಳಿದ್ದಾರೆ. ಈ ಮೊತ್ತ ನೀಡಲು 25ರಿಂದ 30 ಲಕ್ಷ ಕೋಟಿ ರು. ಬೇಕಾಗುತ್ತದೆ. ಕೇಂದ್ರ ಸರ್ಕಾರದ ಬಜೆಟ್ ಗಾತ್ರವೇ 40 ಲಕ್ಷ ಕೋಟಿ ರು. ಇರುವಾಗ ಸುಳ್ಳು ಗ್ಯಾರಂಟಿಗಳನ್ನು ಈಡೇರಿಸಲು ಹಣವನ್ನು ಎಲ್ಲಿಂದ ತರುತ್ತೀರಿ? ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಪ್ರ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪಕ್ಷದ ಪ್ರಮುಖರಾದ ರವಿಶಂಕರ ಮಿಜಾರು ಹಾಗೂ ಬಿಜೆಪಿ ದ.ಕ ಕೋಶಾಧಿಕಾರಿ ಸಂಜಯ್ ಪ್ರಭು ಇದ್ದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಸೋಲು ಅನುಭವಿಸಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ನಾನು ಬೆಂಗಳೂರು ಗ್ರಾಮಾಂತರದಿಂದ ಟಿಕೆಟ್ ಪಡೆದು ಸ್ಪರ್ಧಿಸಿದ್ದರೂ 6.71 ಲಕ್ಷ ಮತ ಪಡೆದಿದ್ದೆ, ಮೊದಲೇ ಟಿಕೆಟ್ ಸಿಕ್ಕಿದ್ದರೆ ಗೆಲ್ಲುವುದು ಸಾಧ್ಯವಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿ ಕಾಂಗ್ರೆಸ್ ಗೆಲ್ಲಲ್ಲ.
- ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ವಕ್ತಾರ