ಸಾರಾಂಶ
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಕಾರ್ಮಿಕ, ರೈತ ವಿರೋಧಿ ಬಜೆಟ್ ಎಂದು ಆರೋಪಿಸಿ ಸಿಐಟಿಯು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಕಾರ್ಮಿಕ, ರೈತ ವಿರೋಧಿ ಬಜೆಟ್ ಎಂದು ಆರೋಪಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಸಿಐಟಿಯು ನ ಪ್ರಮುಖರು ಹಾಗೂ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಬಜೆಟ್ ವಿರೋಧಿಯಾಗಿದ್ದು, ಜನಸಾಮಾನ್ಯರ ಪರವಾಗಿಲ್ಲ. ಅಂಬಾನಿ, ಅದಾನಿ ಪರವಾಗಿದ್ದು, ದೇಶದ ಕಾರ್ಪೊರೇಟ್ ಕಂಪೆನಿಗಳು, ಬಂಡವಾಳಶಾಹಿಗಳಿಗೆ ಶಕ್ತಿ ತುಂಬುವ ಬಜೆಟ್ ಆಗಿದೆ. ಅಸಂಘಟಿತ ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ಅವರನ್ನು ಆರ್ಥಿಕವಾಗಿ ಸಬಲರಾಗಿಸುವ ಯೋಜನೆಗಳಿಲ್ಲ. ರೈತರಿಗೂ ಯಾವುದೇ ಕೊಡುಗೆ ಕೊಟ್ಟಿಲ್ಲ ಎಂದು ಆರೋಪಿಸಿದರಲ್ಲದೇ, ಕೇಂದ್ರ ಸರ್ಕಾರ ಕಾರ್ಮಿಕರ ಪರವಾದ, ರೈತರ ಪರವಾದ ಬಜೆಟ್ ಮಂಡಿಸುವಂತೆ ಒತ್ತಾಯಿಸಿದರು.ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಾಬು, ಖಜಾಂಚಿ ಎನ್.ಡಿ.ಕುಟ್ಟಪ್ಪ, ಪದಾಧಿಕಾರಿಗಳಾದ ಶಾಜಿ ರಮೇಶ್, ಸಾವಿತ್ರಿ, ಜಾನಕಿ, ಯಮುನಾ, ಲಲಿತ, ಹಮೀದ್ ಸೇರಿದಂತೆ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.