ಸಾರಾಂಶ
ಸಂಡೂರು: ಕಾಂಗ್ರೆಸ್ ಪಕ್ಷ ದಲಿತ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ. ಮೀಸಲಾತಿ ವಿರೋಧಿ ನೀತಿ ಕಾಂಗ್ರೆಸ್ಸಿನ ಡಿಎನ್‌ಎದಲ್ಲೇ ಇದೆ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದರು.
ಪಟ್ಟಣದಲ್ಲಿ ಸೋಮವಾರ, ಸಂಸದ ಈ. ತುಕಾರಾಂ ಅವರ ಸಂಸತ್ತಿನ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸುವಂತೆ, ಮೀಸಲಾತಿ ರದ್ದುಗೊಳಿಸುವ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿರೋಧಿಸಿ ಮತ್ತು ಸಂಡೂರಿನ ಅಭಿವೃದ್ಧಿಗೆ ಆಗ್ರಹಿಸಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೀಸಲಾತಿ ವಿರೋಧಿಸಿದ್ದರು. ಇದೀಗ ರಾಹುಲ್ ಗಾಂಧಿ ಮೀಸಲಾತಿ ರದ್ದುಗೊಳಿಸುವ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಎಂದರು.
ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್ ಅವರನ್ನು ಸೋಲಿಸಿ, ಅವಮಾನಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ವಾಲ್ಮೀಕಿ ನಿಗಮದ ಹಗಲು ದರೋಡೆಯಾಗಿದೆ. ಕಾಂಗ್ರೆಸ್ಸಿಗೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಎಸ್ಸಿ-ಎಸ್ಟಿಗೆ ಮೀಸಲಾಗಿದ್ದ ಸುಮಾರು ₹೨೪೪೦೦ ಕೋಟಿ ಅನುದಾನವನ್ನು ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್‌ಗಾಗಿ ಬಳಸುತ್ತಿದೆ. ಚೀನಾ, ಪಾಕಿಸ್ತಾನವನ್ನು ಹೊಗಳುವುದಲ್ಲದೆ, ದೇಶದಲ್ಲಿ ಧಂಗೆ ಎಬ್ಬಿಸುವ ಮನಸ್ಥಿತಿಯನ್ನು ಕಾಂಗ್ರೆಸ್ ಹೊಂದಿದೆ. ಆ ಪಕ್ಷಕ್ಕೆ ಜನತೆ ಬಲಿಯಾಗಬಾರದು. ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಎಂದರು.ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ಪಕ್ಷದ ಅಸಲಿ ಮುಖ ಜನತೆಗೆ ಗೊತ್ತಾಗಿದೆ. ಸಂವಿಧಾನದ ಪುಸ್ತಕ ಹಿಡಿದು, ಸಂವಿಧಾನದ ರಕ್ಷಣೆ ಕುರಿತು ರಾಹುಲ್‌ಗಾಂಧಿ ಮಾತಾಡ್ತಾರೆ. ಕಾಂಗ್ರೆಸ್ ಪಕ್ಷ ಈ ಹಿಂದೆ ಅಂಬೇಡ್ಕರ್ ಮೃತರಾದಾಗ ಅವರ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡಲಿಲ್ಲ ಎಂದರು.
ವಾಲ್ಮೀಕಿ ನಿಗಮದಲ್ಲಿನ ₹೧೮೭ ಕೋಟಿ ಲೂಟಿ ಹೊಡೆದು ಅದನ್ನು ದುರ್ಬಳಕೆ ಮಾಡಲಾಗಿದೆ. ಈ ಹಣದಲ್ಲಿ ₹೨೦.೧೯ ಕೋಟಿಯನ್ನು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳಸಿದ್ದರಿಂದ ನಾನು ಸೋಲಬೇಕಾಯಿತು. ಈ ಹಗರಣದ ಕಿಂಗ್‌ಪಿನ್ ಮಾಜಿ ಮಂತ್ರಿ ನಾಗೇಂದ್ರ ಜೈಲುಪಾಲಾಗಿದ್ದಾರೆ. ತುಕಾರಾಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಈ ಬಾರಿ ಬಿಜೆಪಿಯಿಂದ ಒಬ್ಬರೇ ಸ್ಪರ್ಧಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ತುಕಾರಾಂ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದರು.
ವಿಪ ಸದಸ್ಯ ನವೀನ್‌ಕುಮಾರ್, ಎನ್.ರವಿಕುಮಾರ್, ಮಾಜಿ ಸಂಸದ ವೈ.ದೇವೇಂದ್ರಪ್ಪ, ಮಾಜಿ ಶಾಸಕ ಸೋಮಲಿಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಕೆ.ಎಸ್. ದಿವಾಕರ್ ಮಾತನಾಡಿದರು.ವೇದಿಕೆ ಮೇಲಿದ್ದ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಗಳು ಪಕ್ಷ ಯಾರಿಗೇ ಟಿಕೇಟ್ ನೀಡಲಿ, ಒಮ್ಮತದಿಂದ ಪಕ್ಷ ಸೂಚಿಸುವ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಸಂಕಲ್ಪ ತೊಡಲಾಯಿತು.
ಪ್ರತಿಕೃತಿ ದಹನ:ಬಿಜೆಪಿ ಮುಖಂಡರು ರಾಹುಲ್‌ಗಾಂಧಿ, ತುಕಾರಾಂ ಅವರ ಪ್ರತಿಕೃತಿ ದಹನಕ್ಕೆ ಸಿದ್ಧತೆ ನಡೆಸಿದ್ದರು. ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಜ್ಯದ ವಿವಿಧೆದೆಡೆ ಬಿಜೆಪಿ ಮುಖಂಡರ ಪ್ರತಿಕೃತಿ ಸುಟ್ಟಾಗ ಏನು ಮಾಡ್ತಿದ್ರಿ? ಎಂದು ಪ್ರಶ್ನಿಸಿ, ಕೊನೆಯಲ್ಲಿ ಸಂಸದ ಈ. ತುಕಾರಾಂ ಅವರ ಭಾವಚಿತ್ರವನ್ನು ದಹಿಸಿದರು.
ಮಾಜಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಸಂಡೂರು ಮಂಡಲದ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಸೋಮನಗೌಡ, ಡಿ.ಕೃಷ್ಣಪ್ಪ, ಹನುಮಂತಪ್ಪ, ಓಬಳೇಶ್, ಸುಗುಣ, ಚಂದ್ರಶೇಖರ್ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.