ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮೇಲುಕೋಟೆಸರ್ಕಾರಿ ಶಾಲೆ ಉಳಿಸಿ ಅಭಿಯಾನದೊಂದಿಗೆ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಪೇಂಟಿಂಗ್ ಮಾಡಿ ಆಕರ್ಷಕ ಚಿತ್ರಗಳನ್ನು ಬಿಡಿಸಿ ಅಂದ ಹೆಚ್ಚಿಸುವ ಕಾರ್ಯವನ್ನು ಕನ್ನಡತಿ ಅನು ಅಕ್ಕ ತಂಡ ಮಾಡುತ್ತಿದೆ.
ಕಳೆದ ಒಂದು ವಾರದಿಂದ ಶಾಲೆಯಲ್ಲೇ ಮೊಕ್ಕಂ ಹೂಡಿರುವ ತಂಡ ಕೊರೆಯುವ ಚಳಿಯ ವಾತಾವರಣವನ್ನೂ ಲೆಕ್ಕಿಸದೆ ಶಾಲೆಗೆ ಬಣ್ಣ ಬಳಿಯುವ ಕೈಂಕರ್ಯದಲ್ಲಿ ನಿರತವಾಗಿದೆ. ಶಾಲೆ ಅಭಿವೃದ್ಧಿಗೆ ಬೆಂಬಲ ನೀಡುತ್ತಿರುವ ಬೆಂಗಳೂರಿನ ಸೌಜನ್ಯ ಸೇವಾಶ್ರಮ ಬಣ್ಣಗಳ ಕೊಡುಗೆ ನೀಡುತ್ತಿದೆ.ಮುಖ್ಯಶಿಕ್ಷಕ ಸಂತಾನ ರಾಮನ್ ಮನವಿ ಮೇರೆಗೆ ಮೇಲುಕೋಟೆಗೆ ಆಗಮಿಸಿರುವ ತಂಡಕ್ಕೆ ಹಿರಿಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಶಾಲೆಗೆ ವಿವಿಧ ರೀತಿಯ ಬಣ್ಣಗಳಲ್ಲಿ ಆಕರ್ಷಣೆ ತಂದು ಕೊಡುವ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.
ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಸರ್ಕಾರಿ ಶಾಲೆಗಳ ಬಲವರ್ಧನೆ ಅಭಿಯಾನದ ಅಂಗವಾಗಿ ಪೇಂಟ್ ಮಾಡಿ, ಆಕರ್ಷಕ ಚಿತ್ರಗಳನ್ನು ಬಿಡಿಸಿ ಶಾಲೆಗಳಲ್ಲಿ ಅಂದ ಹೆಚ್ಚಿಸುವ ಮೂಲಕ ಸೇವೆ ಮಾಡುತ್ತಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಶಾಲೆಗೆ ಭೇಟಿ ನೀಡಿ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.ಪುತಿನ ಸೇರಿದಂತೆ ಕವಿಗಳು, ಹಲವು ಗಣ್ಯರು ವ್ಯಾಸಂಗ ಮಾಡಿರುವ ಶಾಲೆಗೆ ಸೇವೆ ನೀಡುವುದು ನಮಗೆ ಖುಷಿ ನೀಡುತ್ತಿದೆ. ಸತತ ಮಳೆಯಿಂದ ನಮ್ಮ ಕಾರ್ಯಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇಲ್ಲೇ ಉಳಿದು ಶಾಲಾ ಆವರಣಕ್ಕೆ ಸಂಪೂರ್ಣ ಪೇಂಟಿಂಗ್ ಮಾಡುವ ಕಾರ್ಯ ಮುಕ್ತಾಯ ಮಾಡುತ್ತೇವೆ. ನಮ್ಮೊಡನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಚಿತ್ರ ಕಲಾವಿದ ಪ್ರಶಾಂತ್ ಪ್ರತಿಬಿಂಬ ಇದ್ದು, ಪೇಂಟಿಂಗ್ ಕೆಲಸ ಮುಗಿದ ನಂತರ ಸ್ಮಾರಕಗಳು, ಕವಿಗಳು, ರಾಜ, ಮಹಾರಾಜರು ಸೇರಿ ಶೈಕ್ಷಣಿಕ ವಿಚಾರಗಳಿಗೆ ಪೂರಕವಾದ ಚಿತ್ರಗಳನ್ನು ಬಿಡಿಸಿ ಮನಮುಟ್ಟುವ ಸುಭಾಷಿತಗಳನ್ನು ಬರೆದು ಶಾಲೆಗೆ ಹೊಸ ಆಕರ್ಷಣೆ ನೀಡಲಾಗುವುದು. ಪುತಿನ ವ್ಯಾಸಂಗ ಮಾಡಿದ ಮಹತ್ವವಿರುವ ಈ ಶಾಲೆಗೆ ವಿಶೇಷ ಕಾಳಜಿವಹಿಸಿ ಕೆಲಸ ಮಾಡಬೇಕಿದೆ. ಶಾಲೆ ಪೇಂಟಿಂಗ್ ಕೆಲಸಕ್ಕೆ ಸರಿಸುಮಾರು 1.50 ಲಕ್ಷ ರು.ವೆಚ್ಚವಾಗಲಿದೆ ಎಂದು ಕನ್ನಡತಿ ಅನುಅಕ್ಕ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆ ಸಿಂದನೂರು ತಾಲೂಕು ಸಿಂದಗಿ ಗ್ರಾಮದ ಯುವತಿ ಅನುಅಕ್ಕ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಆರಂಭಿಸಿ ಸುಮಾರು 135 ಶಾಲೆಗಳಿಗೆ ಬಣ್ಣ ಬಳಿದು ಹಲವು ಆಕರ್ಷಕ ವರ್ಣ ಚಿತ್ರ ಬರೆಸುವ ಕೆಲ ಮಾಡಿದ್ದಾರೆ.ಪುತಿನ ವ್ಯಾಸಂಗ ಮಾಡಿದ ಐತಿಹಾಸಿಕ ಶತಮಾನದ ಶಾಲೆಗೆ ಪೇಂಟಿಂಗ್ ಮಾಡುತ್ತಿರುವ ಅನುಅಕ್ಕ ತಂಡಕ್ಕೆ ದಾನಿಗಳು, ಹಿರಿಯ ವಿದ್ಯಾರ್ಥಿಗಳು ಸೇರಿ ಎಲ್ಲರೂ ಸಹಕಾರ ನೀಡುತ್ತಿದ್ದೇವೆ. ಶಾಲೆಗೆ ಹೊಸ ರೂಪ ಕೊಡಲು ತಂಡ ಮಳೆ ನಡುವೆಯೂ ಸಾಕಷ್ಟು ಶ್ರಮಿಸುತ್ತಿದೆ. ಗ್ರಾಪಂ ಸಹ ಮಾದರಿ ಶಾಲೆಯಾಗಿ ರೂಪಿಸಲು ಶ್ರಮಿಸಲಿದೆ. -ಜಿ.ಕೆ.ಕುಮಾರ್, ಉಪಾಧ್ಯಕ್ಷರು, ಎಸ್ಡಿಎಂಸಿಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ಮೇಲುಕೋಟೆ ಶಾಲೆಗೆ ವರ್ಣಮಯ ಆಕರ್ಷಣೆ ತಂದುಕೊಡಲು ಅನು ಅಕ್ಕ ತಂಡ ಸಾಕಷ್ಟು ಶ್ರಮಿಸುತ್ತಿದೆ. ಅವರ ಸೇವೆಗೆ ನನ್ನ ಸಹಕಾರವಿದೆ. ಹಿರಿಯ ವಿದ್ಯಾರ್ಥಿಗಳು ಪಕ್ಷಭೇದ ಮರೆತು ಸಹಕಾರ ನೀಡಿ ಶಾಲೆ ಬಲವರ್ಧನೆಗೆ ಪ್ರೋತ್ಸಾಹ ನೀಡಬೇಕು.- ದರ್ಶನ್ ಪುಟ್ಟಣ್ಣಯ್ಯ ಶಾಸಕರು, ಮೇಲುಕೋಟೆ ಕ್ಷೇತ್ರ