ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಭಾರತೀ ಸಾಹಿತ್ಯಾರಾಧನೆ ವೇದಿಕೆ ವತಿಯಿಂದ ನೀಡುವ ಮಾಸ್ಕೇರಿ ಅವ್ವನ ಜಾನಪದ ಕಾವ್ಯ ಪ್ರಶಸ್ತಿಗೆ ಆಧ್ಯಾತ್ಮ ಹಾಗೂ ಶರಣ ಚಿಂತಕ ಶಂಕರ್ ದೇವನೂರು ಅವರ ಪತ್ನಿ ಅನುಸೂಯ ದೇವನೂರು ಆಯ್ಕೆಯಾಗಿದ್ದಾರೆ.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭಾವಗೀತೆ ಕವಿಯೆಂದೇ ಹೆಸರಾದ ಮಾಸ್ಕೇರಿ ಎಂ.ಕೆ. ನಾಯಕ್ ಅವರು ಸ್ಥಾಪಿಸಿರುವ ಈ ವೇದಿಕೆ ವತಿಯಿಂದ ಪ್ರತಿವರ್ಷ ಅವರ ತಾಯಿಯ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಬಾರಿ ಅನುಸೂಯ ದೇವನೂರು ಅವರನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶರಣ ತತ್ವ ಚಿಂತನೆಗಳನ್ನು ಪ್ರಸಾರ ಪಡಿಸುತ್ತಾ ಅಪಾರ ಭಕ್ತಸಮೂಹವನ್ನು ಹೊಂದಿರುವ ಕೆಪಿಟಿಸಿಎಲ್ ವಿಶ್ರಾಂತ ಮುಖ್ಯ ಎಂಜಿನಿಯರ್ ಶಂಕರ್ ದೇವನೂರು ಅವರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವರ ಪತ್ನಿ ಅನುಸೂಯ ದೇವನೂರು ಅವರ ನೈತಿಕ ಬೆಂಬಲ ಹಾಗೂ ಕೊಡುಗೆ ಅಪಾರವಾದದ್ದು. ಅವರ ಪ್ರವಚನಗಳಿಗೆ ರಾಜ್ಯ, ಹೊರರಾಜ್ಯಗಳಿಗೆ ತೆರಳಿದಾಗಲೆಲ್ಲಾ ಅವರ ಜತೆಯಲ್ಲೇ ಪ್ರವಾಸ ಮಾಡುವ ಅನುಸೂಯ ದೇವನೂರು ಅವರು ಅವರ ಪ್ರತಿ ಹೆಜ್ಜೆಗೂ ಬೆಂಬಲವಾಗಿ ನಿಂತಿದ್ದಾರೆ.
ಇವರ ಈ ಸೇವೆಯನ್ನು ಮನಗಂಡ ದಾಂಡೇಲಿಯ ಭಾರತೀ ಸಾಹಿತ್ಯಾರಾಧನೆ ವೇದಿಕೆಯು ಇವರನ್ನು ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜ. 23ರಂದು ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕವಿ ಕೃಷ್ಣ ಪದಕಿ, ಗಾಯಕಿ ರೋಹಿಣಿ ಹೆಗಡೆ, ಶಂಕರ ಮುಂಗರವಾಡಿ, ರವಿ, ಐಶ್ವರ್ಯ, ಗುರುರಾಜ್, ಗೂಳೂರು ಇದ್ದರು.ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ ಆಧ್ಯಾತ್ಮ ಚಿಂತಕ ಶಂಕರ್ ದೇವನೂರು, ಮಣ್ಣಿನೊಳಗೆ ಮರದ ಬೇರು ತನ್ನ ಕಷ್ಟ ಕಾರ್ಪಣ್ಯವನ್ನು ನುಂಗಿ ಫಲವತ್ತಾದ ಮರವನ್ನು ಬೆಳೆದು ಹಣ್ಣುಗಳನ್ನು ಪ್ರಾಣಿ ಪಕ್ಷಿಗಳಿಗೆ ನೀಡುತ್ತದೆ. ಅಂತೆಯೇ ಸಮಾಜವು ನನ್ನನ್ನು ಹಣ್ಣಿನ ರೀತಿ ನನ್ನ ಪ್ರವಚನಗಳ ಮೂಲಕ ಸವಿಯುತ್ತಿದ್ದಾರೆ. ಆದರೆ ಎಲ್ಲರೂ ಹಣ್ಣಿನ ರುಚಿ ಬಗ್ಗೆಯಷ್ಟೇ ಹೊಗಳುತ್ತಾರೆ. ಅದರ ಹಿಂದೆ ಶ್ರಮವಹಿಸುವ ಮಣ್ಣು ಹಾಗೂ ಬೇರಿನ ಬಗ್ಗೆ ಯಾರೂ ಆಲೋಚಿಸುವುದಿಲ್ಲ. ಆದರೆ ನನ್ನ ಪ್ರವಚನ ಸುಧೆಯ ಹಿಂದೆ ನನ್ನ ಪತ್ನಿ ಅನುಸೂಯ ದೇವನೂರು ಅವರ ತ್ಯಾಗ, ಶ್ರಮ, ಬೆಂಬಲ ಇರುವುದರಿಂದಲೇ ನಾನು ರಾಜ್ಯ, ಹೊರರಾಜ್ಯಗಳಿಗೆ ತೆರಳಿ ಪ್ರವಚನ ನೀಡಲು ಸಾಧ್ಯವಾಗಿದೆ. ಅನುಸೂಯ ದೇವನೂರು ಅವರ ಈ ಸೇವೆಯನ್ನು ಕಂಡು ದಾಂಡೇಲಿಯ ಭಾರತೀ ಸಾಹಿತ್ಯಾರಾಧನೆ ವೇದಿಕೆಯು ಮಾಸ್ಕೇರಿ ಅವ್ವನ ಜಾನಪದ ಕಾವ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಮೌಲಿಕವಾದದ್ದು ಎಂದು ತಿಳಿಸಿದ್ದಾರೆ.