ಷೋಡಷಾವಧಾನದಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಅನ್ವೇಷ್‌ ಅಂಬೆಕಲ್ಲು

| Published : Jun 29 2024, 12:39 AM IST

ಷೋಡಷಾವಧಾನದಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಅನ್ವೇಷ್‌ ಅಂಬೆಕಲ್ಲು
Share this Article
  • FB
  • TW
  • Linkdin
  • Email

ಸಾರಾಂಶ

ಅನ್ವೇಶ್‌, ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9ನೇ ತರಗತಿ ಪಠ್ಯದ ಜತೆಗೆ 10ನೇ ತರಗತಿಯ ಪಠ್ಯವನ್ನೂ ಒಂದೇ ತಿಂಗಳಲ್ಲಿ ಮುಗಿಸಿ, ಇತರ 10 ವಿಷಯಗಳಲ್ಲಿ ವಿಶ್ವ ದಾಖಲೆಗೆ ಸಾಧನೆಗೆ ಸಿದ್ಧತೆಯಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹದಿನಾರು ಮಂದಿ ನೀಡಿದ 16 ವಿಷಯಗಳನ್ನು ಏಕಕಾಲದಲ್ಲಿ ನೋಡಿ, ಕೇಳಿ, ಗಮನಿಸಿ, ಸ್ಮರಣ ಶಕ್ತಿಯಲ್ಲಿ ದಾಖಲಿಸಿ, ಪ್ರದರ್ಶನ ನೀಡುವ ಷೋಡಷಾವಧಾನದಲ್ಲಿ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಅನ್ವೇಶ್‌ ಅಂಬೆಕಲ್ಲು ಹೆಸರು ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌’ನಲ್ಲಿ ದಾಖಲಾಗಿದೆ.

ಪುಸ್ತಕಗಳ ಹೆಸರು, ಪ್ರಶ್ನೆಗಳು, ಸಂಖ್ಯೆಗಳು, ವಸ್ತುಗಳ ಹೆಸರು, ಚಿತ್ರಗಳ ಹೆಸರು, ಹಾಡುಗಳ ಹೆಸರು, ಗಂಟೆಯ ಶಬ್ದ, ಕ್ರಿಯೇಟಿವ್‌ ಆರ್ಟ್‌ ಮೊದಲಾದವುಗಳ ಜತೆಗೆ ಎರಡೂ ಕೈಗಳಿಗೂ- ಯೋಚನೆಗಳಿಗೂ ನಿರಂತರ ಕೆಲಸದೊಂದಿಗೆ ರೂಬಿಕ್‌ ಕ್ಯೂಬ್‌ ಪರಿಹರಿಸಿಕೊಂಡು, ಮಧ್ಯದಲ್ಲಿ ಕಿರಿಕಿರಿ ಮಾಡುವವರನ್ನು ಸಹಿಸಿಕೊಂಡು, 16 ವಿಷಯಗಳ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ದಾಖಲಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಸಾರ್ವಜನಿಕವಾಗಿ ಗಣ್ಯರು, ಸಾಕ್ಷಿಗಳ ಮುಂದೆ ಈ ಪ್ರದರ್ಶನ ನೀಡಿದ್ದಾರೆ ಎಂದು ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೂಲತಃ ಸುಳ್ಯದವರಾಗಿದ್ದು, ಪ್ರಸ್ತುತ ಬಂಟ್ವಾಳದ ಮೆಲ್ಕಾರ್‌ನಲ್ಲಿ ವಾಸವಿರುವ ಎಂಜಿನಿಯರ್‌ ಮಧುಸೂದನ್‌ ಅಂಬೆಕಲ್ಲು ಮತ್ತು ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪುತ್ರನಾಗಿರುವ ಅನ್ವೇಶ್‌, ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9ನೇ ತರಗತಿ ಪಠ್ಯದ ಜತೆಗೆ 10ನೇ ತರಗತಿಯ ಪಠ್ಯವನ್ನೂ ಒಂದೇ ತಿಂಗಳಲ್ಲಿ ಮುಗಿಸಿ, ಇತರ 10 ವಿಷಯಗಳಲ್ಲಿ ವಿಶ್ವ ದಾಖಲೆಗೆ ಸಾಧನೆಗೆ ಸಿದ್ಧತೆಯಲ್ಲಿದ್ದಾರೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮಿಮಿಕ್ರಿ, ಬೀಟ್‌ಬಾಕ್ಸ್‌, ನೆನಪು ಶಕ್ತಿಯ ಪ್ರತಿಭಾ ಪ್ರದರ್ಶನ, ವಯೋಲಿನ್‌, ಚಿತ್ರಕಲೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ ಎಂದರು.

ಅನ್ವೇಷ್‌ ಅಂಬೆಕಲ್ಲು ಮಾತನಾಡಿ, ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್‌ ಅವರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತಂದೆ- ತಾಯಿ ನನ್ನ ಮೇಲೆ ಭರವಸೆ ಇಟ್ಟು ಸ್ವರೂಪ ಅಧ್ಯಯನ ಕೇಂದ್ರಕ್ಕೆ ದಾಖಲಿಸಿದ ಕಾರಣ ಈ ಸಾಧನೆ ಸಾಧ್ಯವಾಗಿದೆ. ಇಲ್ಲಿ ನನ್ನ ಸಾಧ್ಯತೆಗಳಿಗೆ ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಧುಸೂದನ್‌ ಅಂಬೆಕಲ್ಲು, ತೇಜಸ್ವಿ ಅಂಬೆಕಲ್ಲು, ಆದಿ ಸ್ವರೂಪ ಮತ್ತು ಕಾವ್ಯ ಸ್ವರೂಪ ಇದ್ದರು.