ಸಾರಾಂಶ
ಏಜೆನ್ಸಿಯೊಂದರಲ್ಲಿ ಕೇರ್ ಟೇಕರ್ ಆಗಿರುವ 58 ವರ್ಷದ ಹೀಲ್ಡಾ ಮಂಥೆರೋ
ಕನ್ನಡಪ್ರಭ ವಾರ್ತೆ ದಾವಣಗೆರೆಹಮಾಸ್ ಉಗ್ರರು ದಾಳಿ ನಡೆಸಿದ ಸ್ಥಳದಿಂದ ಕೇವಲ 100 ಕಿಮೀ ಅಂತರದಲ್ಲಿ ಏಜೆನ್ಸಿಯೊಂದರಲ್ಲಿ ಕೇರ್ ಟೇಕರ್ ಆಗಿ ಕಾರ್ಯ ನಿರ್ವಹಿಸುತ್ತಿರುವ 58 ವರ್ಷದ ಪತ್ನಿಯ ಬಗ್ಗೆ ದಾವಣಗೆರೆಯಲ್ಲಿರುವ ಪತಿ ಹಾಗೂ ಕುಟುಂಬ ವರ್ಗದವರು ತೀವ್ರ ಚಿಂತಿತರಾಗಿದ್ದಾರೆ.
ಇಸ್ರೇಲ್ ಸೇನೆಯು ಹಮಾಸ್ ಉಗ್ರರ ಮಧ್ಯೆ ಯುದ್ಧ ಮುಂದುವರಿದಿದೆ. ಕೇರ್‌ಟೇಕರ್ ಆಗಿ ಯಹೂದಿಗಳ ನಾಡಿನಲ್ಲಿ ಕಳೆದೊಂದು ದಶಕದಿಂದಲೂ ಇರುವ ಪತ್ನಿ ಹೀಲ್ಡಾ ಮಂಥೆರೋ ಬಗ್ಗೆ ಚಿಂತೆ ಮಾಡುತ್ತಾ ಪತಿ ದಾವಣಗೆರೆಯಲ್ಲಿ ಕಾಲ ಕಳೆಯುತ್ತಿದ್ದು, ಅತ್ತ ಪತ್ನಿ ತಾವು ಸುರಕ್ಷಿತ ಸ್ಥಳದಲ್ಲಿರುವುದಾಗಿ ಹೇಳಿದರೂ ನಂಬದ ಸ್ಥಿತಿಯಲ್ಲಿ ಪತಿ ಇದ್ದಾರೆ.ಹಮಾಸ್ ಉಗ್ರರು ಅಟ್ಟಹಾಸ ಮೆರೆದು 5 ದಿನ ಕಳೆದಿದ್ದು, ಉಗ್ರರ ಮಟ್ಟ ಹಾಕಲು, ಗಾಜಾ ಮೇಲೆ ಇಸ್ರೇಲ್ ತೀವ್ರ ದಾಳಿ ಮುಂದುವರಿಸುತ್ತಿರುವುದಾಗೇ ಹೀಲ್ಡಾ ಮೆಂಥೆರೋ ಕುಟುಂಬ ಭೀತಿಯಿಂದಲೇ ದಿನ ಕಳೆಯುತ್ತಿದೆ.
ಏಜೆನ್ಸಿಯೊಂದರಲ್ಲಿ ಕೇರ್ ಟೇಕರ್ ಆಗಿ ಹೀಲ್ಡಾ ಮಂಥೆರೋ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಇಸ್ರೇಲ್ ಎದುರಿಸುತ್ತಿರುವ ಸವಾಲು, ಸಂಕಷ್ಟ, ಉಗ್ರರ ದಮನಕ್ಕೆ ಮುಂದಾಗಿರುವ ಎಲ್ಲಾ ವಿಚಾರವನ್ನು ತಮ್ಮ ಪತಿ ಆಂಬ್ರೋಸ್ ಹಾಗೂ ಕುಟುಂಬ ವರ್ಗಕ್ಕೆ ಹೀಲ್ಡಾ ಮಂಥೆರೋ ವಿವರಿಸಿದ್ದು, ಪ್ರತ್ಯಕ್ಷವಾಗಿ ಕಾಣುತ್ತಿರುವ ದೃಶ್ಯಗಳಿಂದಲೂ ಆಕೆ ಮಾನಸಿಕವಾಗಿ ಕುಂದಿದ್ದಾರೆ. ನಿರಂತರವಾಗಿ ಇಸ್ರೇಲ್‌ನಲ್ಲಿರುವ ಕನ್ನಡಿಗರ ಯೋಗಕ್ಷೇಮ ವಿಚಾರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರವೂ ಭಾರತೀಯರ ಯೋಗಕ್ಷೇಮಕ್ಕೆ ಒತ್ತು ನೀಡಿದೆ.ನಿತ್ಯವೂ ವಾಟ್ಸಪ್ ಕಾಲ್, ವೀಡಿಯೋ ಕಾಲ್:
ಹೀಲ್ಡಾ ಮೆಂಥೆರೋ ದಾವಣಗೆರೆ ಲೂರ್ಡ್ಸ್ ಬಾಲಕರ ಪ್ರಾಥಮಿಕ ಶಾಲೆಯಲ್ಲಿ 15 ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಆಗಸ್ಟ್ 2014ರಲ್ಲಿ ಇಸ್ರೇಲ್‌ಗೆ ತೆರಳಿದ್ದರು. ಡಿಸೆಂಬರ್ 2016ರಲ್ಲಿ ಮಗನ ಮದುವೆಗೆಂದು ಬಂದು, ಜನವರಿ 2022ರಂದು ಇಸ್ರೇಲ್‌ಗೆ ಮರಳಿದ್ದ ಹೀಲ್ಡಾ ಮೆಂಥೆರೋ ನಿತ್ಯವೂ ಮಕ್ಕಳು, ಪತಿ, ಸೊಸೆ ಜೊತೆಗೆ ವಾಟ್ಸಪ್ ಕಾಲ್, ವೀಡಿಯೋ ಕಾಲ್ ಮೂಲಕ ಸಂವಹನ ನಡೆಸಿದ್ದರು. ಈಗ ಹಮಾಸ್ ಉಗ್ರರ ದಾಳಿಗೆ ತುತ್ತಾದ ಇಸ್ರೇಲ್‌ನಿಂದ ನಿತ್ಯವೂ ಕುಟುಂಬದೊಂದಿಗೆ ವಾಟ್ಸಪ್ ಕಾಲ್, ವೀಡಿಯೋ ಕಾಲ್ ಮೂಲಕ ತಮ್ಮವರೊಂದಿಗೆ ಬೆರೆಯುತ್ತಿದ್ದಾರೆ ಎಂದು ಹೀಲ್ಡಾರ ಪತಿ ಆಂಬ್ರೋಸ್ ತಿಳಿಸಿದ್ದಾರೆ.ಆಂಬ್ರೋಸ್ ಸಹ ಹರಿಹರ ತಾ. ಮಲ್ಲನಾಯಕನಹಳ್ಳಿ ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸಿ, ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. 62 ವರ್ಷದ ಆಂಬ್ರೋಸ್‌ರಿಗೆ ತಮ್ಮ ಪತ್ನಿ ಹೀಲ್ಡಾ ಮಂಥೆರೋ ಅವರದ್ದೇ ಪ್ರತಿಕ್ಷಣದ ಚಿಂತೆಯಾಗಿದೆ. ಸದ್ಯ ದಾವಣಗೆರೆ ಹೊರ ವಲಯದ ಹೌಸಿಂಗ್ ಬೋರ್ಡ್‌ನ ತುಂಗಭದ್ರಾ ಬಡಾವಣೆಯಲ್ಲಿ ವಾಸಿಸುತ್ತಿದ್ದಾರೆ. ಇಸ್ರೇಲ್‌ನ ಥೀಬೇರ್‌ನಲ್ಲಿ ಪತ್ನಿ ಸುರಕ್ಷಿತವಾಗಿ ಭಾರತಕ್ಕೆ ಮರಳೆಂದು ಪ್ರಾರ್ಥಿಸುತ್ತಿದ್ದಾರೆ.