ಸಾರಾಂಶ
ಚಿಕ್ಕಮಗಳೂರಿನಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಕಾಲತ್ತಿನ ಸಭೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದಲ್ಲಿ ಪ್ರತಿಯೊಬ್ಬರು ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವ ಜೊತೆಗೆ ತನಗೆ ಇಚ್ಛೆ ಇರುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.
ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ, ನ್ಯಾಷನಲ್ ನೆಟ್ವರ್ಕ್ ಆಫ್ ಸೆಕ್ಸ್ ವರ್ಕರ್ಸ್ ಸಂಘಟನೆಗಳ ಆಶ್ರಯದಲ್ಲಿ ನಗರದಲ್ಲಿ ನಡೆದ ಜಿಲ್ಲಾಮಟ್ಟದ ವಕಾಲತ್ತಿನ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ವ್ಯಕ್ತಿಗೆ ಯಾವುದೇ ವೃತ್ತಿ ಮಾಡುವ ಅವಕಾಶವಿದೆ. ಆದರೂ ನೈತಿಕತೆ ಆಧಾರದ ಮೇಲೆ ಕೆಲ ಸಮುದಾಯಗಳು ನಡೆಸುತ್ತಿರುವ ವೃತ್ತಿಯನ್ನು ಕೀಳೆಂದು ನೋಡುವ ಮನಸ್ಥಿತಿಗಳು ನಮ್ಮಲ್ಲಿ ಇವೆ. ಇವುಗಳನ್ನು ಹೋಗಲಾಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.ಹಿಂದೆ ದೇಶದಲ್ಲಿ ದೇವದಾಸಿ ವ್ಯವಸ್ಥೆ ಜಾರಿಯಲ್ಲಿತ್ತು. ಅದನ್ನು ಕಾಯ್ದೆಗಳ ಮೂಲಕವೇ ನಿರ್ಮೂಲನೆ ಮಾಡಲಾಗಿದೆ. ಈ ಪದ್ಧತಿಯಲ್ಲಿ ದೇವರ ಹೆಸರಿನಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ನಮ್ಮದು ಪುರುಷ ಪ್ರಧಾನ ಸಮಾಜವಾಗಿದ್ದರಿಂದ ಹೆಣ್ಣನ್ನು ಭ್ರೂಣದಲ್ಲಿಯೇ ಕೊಲ್ಲಲಾಗುತ್ತಿತ್ತು. ಆದರೆ, ಎಲ್ಲದಕ್ಕೂ ಹೆಣ್ಣೇ ಬೇಕಿತ್ತು. ಇತ್ತೀಚಿನ ದಿನ ಗಳಲ್ಲಿ ವ್ಯವಸ್ಥೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದು ತಿಳಿಸಿದರು.
ಸಂಗಮ ಸಂಘಟನೆ ಕಾರ್ಯಕಾರಿ ನಿರ್ದೇಶಕ ರಾಜೇಶ್ ಶ್ರೀನಿವಾಸ್ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರು ಮೈ ಮಾರಿಕೊಳ್ಳುತ್ತಿದ್ದಾರೆ ಎಂದು ಸಮಾಜ ತಿಳಿದುಕೊಂಡಿದೆ. ಆದರೆ, ಬಡತನ ಹಾಗೂ ಕುಟುಂಬ ನಿರ್ವಹಣೆಗಾಗಿ ಅನಿವಾರ್ಯವಾಗಿ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿಯೊಂದು ವೃತ್ತಿಗೂ ಗೌರವ ಸಲ್ಲಿಸಿದಂತೆ ಲೈಂಗಿಕ ಕಾರ್ಯಕರ್ತರಿಗೂ ಗೌರವ ಸೂಚಿಸಬೇಕು ಎಂದರು.ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಸವಲತ್ತು ಹಾಗೂ ಸೌಕರ್ಯ ಒದಗಿಸಬೇಕು. ಪ್ರಪಂಚದ ಹಲವು ದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಕಾನೂನಿನಡಿ ವೃತ್ತಿ ನಡೆಸಲು ಅವಕಾಶವಿದೆ. ಆದರೆ, ಭಾರತದಲ್ಲಿ ಮಾತ್ರ ಈ ವೃತ್ತಿ ಮಾಡುತ್ತಿರುವವರನ್ನು ಅಪರಾಧಿಗಳು ಎನ್ನುವಂತೆ ನೋಡ ಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮೇಘ ಮಲ್ನಾಡ್, ಭಾರತಿ, ಫಾತಿಮತ್ ನಾಜಿಯ, ಮುಕ್ತಾ ಪೂಜಾರ್ ಇದ್ದರು. 26 ಕೆಸಿಕೆಎಂ 1ಚಿಕ್ಕಮಗಳೂರಿನ ಹೋಟೆಲ್ ಸಭಾಂಗದಲ್ಲಿ ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ, ನ್ಯಾಷನಲ್ ನೆಟ್ವರ್ಕ್ ಆಫ್ ಸೆಕ್ಸ್ ವರ್ಕರ್ಸ್ ಸಂಘಟನೆಗಳ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಕಾಲತ್ತಿನ ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿದರು.