ವಿಹಾನ್ ಆಸ್ಪತ್ರೆಯ ವೈದ್ಯರಿಂದ ವೃದ್ಧೆಗೆ ಮಹಾಪಧಮನಿಯ ಕವಾಟ ಅಳವಡಿಕೆ

| Published : Feb 15 2024, 01:35 AM IST

ವಿಹಾನ್ ಆಸ್ಪತ್ರೆಯ ವೈದ್ಯರಿಂದ ವೃದ್ಧೆಗೆ ಮಹಾಪಧಮನಿಯ ಕವಾಟ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಶಸ್ತ್ರಚಿಕಿತ್ಸೆಯನ್ನು ನಾನು ಮತ್ತು ಮುಂಬೈನಿಂದ ಆಗಮಿಸಿದ್ದ ಡಾ. ರಿಷಬ್ ಪಾರೆಕ್ ಅವರ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ಆಸ್ಪತ್ರೆಯ ವೈದ್ಯ ಡಾ. ವಿಜಯಕೃಷ್ಣ ಕೋಳೂರು ಹೇಳಿದರು.

ಹುಬ್ಬಳ್ಳಿ: 64 ವರ್ಷದ ವಯೋವೃದ್ಧೆಗೆ ಹುಬ್ಬಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಟಿಎವಿಐ (ಟ್ರಾನ್ಸ್‌ಕ್ಯಾಥೇಟರ್‌ ಆರೋಟಿಕ್‌ ವಾಲ್ವ್‌ ಇಂಪ್ಲಾಟೇಷನ್) ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ ಎಂದು ವಿಹಾನ್‌ ಆಸ್ಪತ್ರೆಯ ವೈದ್ಯ ಡಾ. ವಿಜಯಕೃಷ್ಣ ಕೋಳೂರು ಹೇಳಿದರು.

ಅವರು ಬುಧವಾರ ನಗರದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ರೋಗಿಯು ಕಳೆದ 3 ತಿಂಗಳಿಂದ ತಲೆ ತಿರುಗುವಿಕೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರು ನಮ್ಮ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಾಗ ತೀವ್ರವಾದ ಮಹಾಪಧಮನಿಯ ತೊಂದರೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿತು. ಅವರಿಗೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ನಿರ್ಧರಿಸಲಾಯಿತು. ಆದರೆ, ಅವರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಕೈಬಿಡಲಾಯಿತು. ಅಂತಿಮವಾಗಿ ರೋಗಿಯನ್ನು ಟಿಎವಿಐ ಕಾರ್ಯ ವಿಧಾನಕ್ಕಾಗಿ ಒಳಪಡಿಸಲು ನಿರ್ಧರಿಸಲಾಯಿತು. ಇದು ರೋಗಿಗಳಿಗೆ ಅತ್ಯಂತ ಸುಧಾರಿತ ಮತ್ತು ಸರಳ ತಂತ್ರವಾಗಿದೆ. ಈ ಒಂದು ಶಸ್ತ್ರಚಿಕಿತ್ಸೆಯನ್ನು ನಾನು ಮತ್ತು ಮುಂಬೈನಿಂದ ಆಗಮಿಸಿದ್ದ ಡಾ. ರಿಷಬ್ ಪಾರೆಕ್ ಅವರ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ರೋಗಿಗೆ Native Aortic Valve(ಮಹಾಪಧಮನಿಯ ಕವಾಟ)ದ ಮೇಲೆ ಕೃತಕ ಸ್ಟೆಂಟ್ ಆಧಾರಿತ Transcatheter Aortic valve ಯಶಸ್ವಿಯಾಗಿ ಅಳವಡಿಸಲಾಯಿತು. ಸಮರ್ಪಕ ಚಿಕಿತ್ಸೆ ನೀಡಿ 2 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಮಹಾಪಧಮನಿಯ ಕವಾಟ ಅಳವಡಿಕೆಯ ಶಸ್ತ್ರಚಿಕಿತ್ಸೆ ಹುಬ್ಬಳ್ಳಿಯಲ್ಲಿ ಪ್ರಥಮ ಎಂಬುದು ವಿಶೇಷ ಎಂದರು.

ಒಟ್ಟಾರೆ ಈ ಶಸ್ತ್ರ ಚಿಕಿತ್ಸೆಯನ್ನು ₹15 ಲಕ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಬೆಂಗಳೂರು, ದೆಹಲಿ, ಪೂನಾದಂತಹ ಮಹಾ ನಗರಗಳಲ್ಲಿ ಇದರ ಶಸ್ತ್ರಚಿಕಿತ್ಸೆಗೆ ಇನ್ನೂ ಹೆಚ್ಚಿನ ಹಣ ಖರ್ಚಾಗುವ ಸಂಭವವಿದೆ. ಹುಬ್ಬಳ್ಳಿಯಲ್ಲಿರುವ ನಮ್ಮ ಆಸ್ಪತ್ರೆಯಲ್ಲಿ ನುರಿತ ತಜ್ಞ, ವೈದ್ಯರು ಲಭ್ಯವಿದ್ದು, ಕಡಿಮೆ ವೆಚ್ಚದಲ್ಲಿ ರೋಗಿಗಳ ಶಸ್ತ್ರಚಿಕಿತ್ಸೆ ನಡೆಸುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವೈದ್ಯರಾದ ಡಾ. ಜುನೈತ್‌ ಜಮಾದಾರ, ಡಾ. ಮಾರ್ತಾಂಡಪ್ಪ, ಡಾ. ತೇಜಶ್ವಿನಿ ಸೇರಿದಂತೆ ಹಲವರಿದ್ದರು.