ಕಾರ್ಯಕ್ರಮ ನಿರೂಪಣೆಗೆ ಹೊಸ ತಿರುವು ನೀಡಿದ ಅಪರ್ಣಾ

| Published : Jul 14 2024, 01:44 AM IST / Updated: Jul 14 2024, 09:45 AM IST

ಸಾರಾಂಶ

ಕಿರುತೆರೆ, ಹಿರಿತೆರೆ, ಕಾರ್ಯಕ್ರಮ ನಿರೂಪಣೆಯಂತಹ ಮೂರು ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಕಾರ್ಯಕ್ರಮ ನಿರೂಪಣೆಗೆ ಹೊಸ ತಿರುವನ್ನು ನೀಡಿದವರು ಅಪರ್ಣಾ. ಅವರ ನಿಧನ ಕನ್ನಡ ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.

 ತುಮಕೂರು :  ಕಿರುತೆರೆ, ಹಿರಿತೆರೆ, ಕಾರ್ಯಕ್ರಮ ನಿರೂಪಣೆಯಂತಹ ಮೂರು ಪ್ರಕಾರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಕಾರ್ಯಕ್ರಮ ನಿರೂಪಣೆಗೆ ಹೊಸ ತಿರುವನ್ನು ನೀಡಿದವರು ಅಪರ್ಣಾ. ಅವರ ನಿಧನ ಕನ್ನಡ ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪದಿಂದ ಏರ್ಪಡಿಸಿದ್ದ ಅಪರ್ಣಾಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಂಚನಹಳ್ಳಿ ಎಂಬ ಕುಗ್ರಾಮದಲ್ಲಿ ಜನಿಸಿದ ಅವರು ನಗರವಾಸಿಯಾಗಿ ಸ್ಫುಟವಾದ ಕನ್ನಡ ಬಳಕೆ, ಉಚ್ಛಾರಣೆಯಿಂದ ಖ್ಯಾತಿ ಪಡೆದು ಅತಿಗಣ್ಯರ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ನಿರೂಪಣೆ ಮಾಡಿದ್ದಾರೆ. ಜತೆಗೆ ಕಿರುತೆರೆಯ ಮಜಾ ಟಾಕೀಸ್‌ನಂತಹ ಮನರಂಜನಾ ಕಾರ್ಯಕ್ರಮದಲ್ಲಿ ಜನಪ್ರಿಯತೆಯ ಉತ್ತುಂಗ ಶಿಖರವನ್ನೇರಿದರು. ಅಂತಿಮ ದಿನಗಳಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿದರೂ ಅದು ಫಲ ನೀಡದೆ ಅವರನ್ನು ಬಲಿ ತೆಗೆದುಕೊಂಡಿತು ಎಂದರು. 

ಕೆಎಂಎಫ್ ನಿವೃತ್ತ ಜಂಟಿ ನಿರ್ದೇಶಕ ಪ್ರಸಾದ್‌ ಮಾತನಾಡಿ, ಮಸಣದ ಹೂವು ಎಂಬ ಚಲನಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಅಪರ್ಣಾ ಅನೇಕ ಖ್ಯಾತ ನಿರ್ದೇಶಕರ ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುವ ಮೂಲಕ ಚಲನಚಿತ್ರ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ನಿವೃತ್ತ ಶಿಕ್ಷಕಿ ಮಂಜುಳಾ ಮಾತನಾಡಿ, ಖ್ಯಾತ ನಿರೂಪಕಿ ಆಗಿದ್ದ ಅಪರ್ಣಾ ಸದಾ ನಗುಮುಖದಿಂದ ಇದ್ದು, ಟಿ.ಎನ್.ಸೀತಾರಾಂರವರ ಮುಕ್ತ ಧಾರಾವಾಹಿಯ ಪಾತ್ರವನ್ನಂತೂ ಮರೆಯಲಾಗದು ಎಂದರು.

ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಜಿ.ಹೆಚ್.ಮಹದೇವಪ್ಪ, ತಾಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ನಟರಾಜು, ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್, ಪ್ರೊ. ಶಶಿಕುಮಾರ್ ಉಪಸ್ಥಿತರಿದ್ದರು.