ಚಿಂತೆ ಬಿಟ್ಟರೆ ಮಾನಸಿಕ-ದೈಹಿಕ ಆರೋಗ್ಯ

| Published : Jul 29 2024, 12:59 AM IST / Updated: Jul 29 2024, 01:00 AM IST

ಸಾರಾಂಶ

ಚನ್ನಪಟ್ಟಣ: ಅತಿಯಾಗಿ ಚಿಂತಿಸದೇ ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡಲ್ಲಿ ದೀರ್ಘಕಾಲ ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮನೋವೈದ್ಯರಾದ ಡಾ. ಸಿ.ಆರ್.ಚಂದ್ರಶೇಖರ್ ತಿಳಿಸಿದರು.

ಚನ್ನಪಟ್ಟಣ: ಅತಿಯಾಗಿ ಚಿಂತಿಸದೇ ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡಲ್ಲಿ ದೀರ್ಘಕಾಲ ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮನೋವೈದ್ಯರಾದ ಡಾ. ಸಿ.ಆರ್.ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಶ್ರೀ ಕಾಳಿಕಾಂಭ ಕಮಟೇಶ್ವರ ದೇವಸ್ಥಾನ ಸೇವಾ ಸಮಿತಿಯಿಂದ ಶ್ರೀ ಚಾಮುಂಡೇಶ್ವರಿ ಜನ್ಮೋತ್ಸವದ ಅಂಗವಾಗಿ ಆಯೋಜಿಸಿದ್ದ ಅಮ್ಮನವರ ಉತ್ಸವ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿರಿಯರು ೭೫ ವರ್ಷದವರೆಗೆ ಬದುಕು ನಡೆಸಿದರೆ, ಯುವಕರು ೩೫ ವರ್ಷಕ್ಕೆ ಹೃದಯಾಘಾತದಿಂದ ನಿಧನರಾಗುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮಲ್ಲಿ ಮಾನಸಿಕ ಖಿನ್ನತೆ ಹೆಚ್ಚಾದಂತೆ ನಮ್ಮ ಹೃದಯವೂ ಮೃದುವಾಗುತ್ತಾ ಹೋಗುತ್ತದೆ. ಜೊತೆಗೆ ಮಿತ ಆಹಾರ ಸೇವನೆ ಇಲ್ಲದೆ ಗೊಬ್ಬಿನ ಅಂಶಗಳಿಂದ ಹೃದಯ ಸ್ತಂಭನ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಇರುವುದರಲ್ಲೇ ತೃಪ್ತಿ ಪಟ್ಟುಕೊಂಡು ಲಾಭ-ನಷ್ಠ, ಸೋಲು ಗೆಲುವನ್ನು ಸಮನಾಗಿ ಸ್ವೀಕಾರ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿದಿನ ನಮ್ಮ ಕೆಲಸಗಳಿಂದ ಹೃದಯಕ್ಕೆ ಹೆಚ್ಚು ಒತ್ತಡ ಕೊಡುತ್ತೇವೆ. ನೀವು ಹೃದಯಕ್ಕೆ ೧೦ ನಿಮಿಷ ಪ್ರೀತಿ ಕೊಟ್ಟರೆ ಹೃದಯ ನಿಮ್ಮನ್ನು ೧ ದಿನ ಹೆಚ್ಚು ಕೆಲಸ ಮಾಡುತ್ತದೆ. ಈ ನಿಟ್ಟಿನಲ್ಲಿ ನೀವು ಎಲ್ಲರನ್ನು ಪ್ರೀತಿಸಿ ನಿಮ್ಮ ಮನಸ್ಸನ್ನು ಸಂತೋಷವಾಗಿಟ್ಟುಕೊಂಡರೆ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.

ಅಯೋಧ್ಯೆಯ ಶ್ರೀ ರಾಮಲಲ್ಲ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ನಾವು ನಮ್ಮ ಕಲೆ, ಪರಂಪರೆಗೆ ಗೌರವ ಕೊಟ್ಟಾಗ ಯಶಸ್ಸಿನ ರೂಪದಲ್ಲೆ ನಮಗೆ ಅದು ಗೌರವ ತಂದುಕೊಡುತ್ತದೆ. ಪ್ರತಿಯೊಬ್ಬರು ತಮ್ಮ ವೃತ್ತಿಯನ್ನು ಗೌರವಿಸಿ ಶ್ರದ್ದೆಯಿಂದ ಕೆಲಸ ಮಾಡಿದರೆ ಅವರಿಗೆ ದೇವರೆ ಯಶಸ್ಸು ನೀಡುತ್ತಾನೆ ಎಂದರು.

ಅಯೋಧ್ಯಯ ಶ್ರೀರಾಮಲಲ್ಲ ವಿಗ್ರಹ ಕೆತ್ತನೆ ಮಾಡಿದ್ದೇನೆ ಎಂದು ಎಲ್ಲರೂ ನನ್ನನ್ನು ಅಭಿನಂದಿಸುತ್ತಿದ್ದಾರೆ. ಆದರೆ ಅದನ್ನು ನಾನು ಮಾಡಿದ್ದಲ್ಲ. ದೇವರು ಕೊಟ್ಟ ಅವಕಾಶವನ್ನು ಬಳಸಿಕೊಂಡು ಶ್ರದ್ಧ ಮತ್ತು ಏಕಾಗ್ರತೆಯಿಂದ ನನ್ನ ಕೆಲಸ ಮಾಡಿದ್ದರಿಂದ ಕಲ್ಲಿನಲ್ಲಿ ಬಾಲರಾಮನು ನೆಲೆಗೊಂಡಿದ್ದಾನೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ದೇವರು ಕೊಡುವ ಅವಕಾಶವನ್ನು ಶ್ರದ್ಧೆಯಿಂದ ನಿಭಾಯಿಸಿ ಅಂದಿನ ಕೆಲಸವನ್ನು ಅಂದೇ ಮಾಡಿದರೆ ಯಶಸ್ಸು ಮತ್ತು ಆರೋಗ್ಯ ಎಲ್ಲವೂ ಸಿಗುತ್ತದೆ ಎಂದು ಹೇಳಿದರು.

ಶ್ರೀರಾಮಲಲ್ಲನ ವಿಗ್ರಹದ ಕೆತ್ತನೆಗೆ ಅವಕಾಶ ದೊರೆತಾಗ ಅಳುಕು ಮೂಡಿತು. ಇಡೀ ವಿಶ್ವವೇ ಮೆಚ್ಚುವಂತೆ ವಿಗ್ರಹ ಕೆತ್ತನೆ ಮಾಡುವುದು ಅಷ್ಟೊಂದು ಸುಲಭವಲ್ಲ. ಅಲ್ಲದೆ ಜನರು ತಮ್ಮದೇ ಕಲ್ಪನೆಯಲ್ಲಿ ದೇವರನ್ನು ಕಲ್ಪಿಸಿಕೊಂಡಿದ್ದು, ಅದಕ್ಕೆ ತಕ್ಕಂತೆ ವಿಗ್ರಹ ರೂಪಿಸಬೇಕಿತ್ತು. ವಿಗ್ರಹ ಕೆತ್ತನೆಗೆ ಮುನ್ನ ಶಿಲ್ಪಶಾಸ್ತ್ರದಲ್ಲಿ ಸಾಕಷ್ಟು ಅಧ್ಯಯನ ಮಾಡುವ ಜತೆಗೆ ೫ ಸಾವಿರಕ್ಕೂ ಹೆಚ್ಚು ರಾಮನ ಭಾವಚಿತ್ರಗಳನ್ನು ಸಂಗ್ರಹಿಸಿ ದೇವರನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಕಲ್ಲಿಗೆ ರಾಮಲಲ್ಲನ ರೂಪ ನೀಡುವ ಪ್ರಯತ್ನ ಮಾಡಿದ್ದು ನನ್ನ ಶ್ರದ್ಧೆ ಮತ್ತು ಪ್ರಯತ್ನಕ್ಕೆ ದೇವರು ಫಲ ನೀಡಿದ್ದಾನೆ ಎಂದು ತಮ್ಮ ಅನುಭವ ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಶ್ರೀ ಕಾಳಿಕಾಂಭ ಕಮಟೇಶ್ವರ ದೇವಸ್ಥಾನ ಸೇವಾ ಸಮಿತಿಯಿಂದ ಡಾ.ಸಿ.ಆರ್.ಚಂದ್ರಶೇಖರ್, ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಲಾಯಿತು. ಸಾಂತ್ವನ ಫೌಂಡೇಷನ್‌ ಸಂಸ್ಥಾಪಕರಾದ ಪವಿತ್ರ ಆರ್.ಪ್ರಭಾಕರ್ ರೆಡ್ಡಿ, ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಮ್ಮ, ಶ್ರೀ ಕಾಳಿಕಾಂಭ ಕಮಟೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ವೀರಭದ್ರಾಚಾರ್, ಉಪಾಧ್ಯಕ್ಷರಾದ ಎಚ್.ಪಿ. ನಾಗರಾಜಚಾರ್, ಬ್ರಹ್ಮಾಚಾರ್, ಲೆಕ್ಕಪರಿಶೋದಕ ಚಿನ್ನಸ್ವಾಮಾಚಾರ್, ಪ್ರಧಾನ ಕಾರ್ಯದರ್ಶಿ ಜೆ.ಎಸ್. ರಾಜು, ಲಿಂಗರಾಜು ಇತರರಿದ್ದರು.

( ಬೇರೆಬೇರೆಯವರಿಗೆ ಸನ್ಮಾನ ಹಾಗಾಗಿ ಎರಡೂ ಫೋಟೋ ಬಳಸಿ ಒಂದೇ ಕ್ಯಾಪ್ಷನ್‌)

ಪೊಟೋ೨೮ಸಿಪಿಟಿ೫: ಚನ್ನಪಟ್ಟಣದ ಶ್ರೀ ಕಾಳಿಕಾಂಭ ಕಮಟೇಶ್ವರ ದೇವಸ್ಥಾನ ಸೇವಾ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮನೋವೈದ್ಯರಾದ ಡಾ. ಸಿ.ಆರ್.ಚಂದ್ರಶೇಖರ್‌ ಹಾಗೂ ಅಯೋಧ್ಯೆಯ ಶ್ರೀ ರಾಮಲಲ್ಲ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್‌ ಅವರನ್ನು ಸನ್ಮಾನಿಸಲಾಯಿತು.