ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಸವಿತ ಸಮಾಜದ ಜನಾಂಗವನ್ನು ಅಭಿವೃದ್ಧಿಪಡಿಸುವ ಜೊತೆಗೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಮಾಜದ ಹಿರಿಯ ಮುಖಂಡ ರಾಮಲಿಂಗಯ್ಯ ತಿಳಿಸಿದರು.ಸವಿತ ಸಮಾಜದ ಕಚೇರಿಯಲ್ಲಿ ಸಿ.ಎ.ಕೆರೆ ಹೋಬಳಿ ಘಟಕದಿಂದ ನಡೆದ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಸವಿತ ಸಮಾಜದ ಜನರು ಹಿಂದಿನಿಂದಲೂ ತುಳಿತಕ್ಕೆ ಒಳಗಾಗುತ್ತಿದ್ದಾರೆ. ಉದ್ಯೋಗವಿಲ್ಲದೆ ಕ್ಷೌರಿಕ ಕೆಲಸದಲ್ಲಿ ತೊಡಗಿದ್ದಾರೆ. ಸರ್ಕಾರ ವೃತ್ತಿಪರ ಕೌಶಲ್ಯ ಅಭಿವೃದ್ಧಿಗಾಗಿ ಸಾಲ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
ಸಮಾಜದ ತಾಲೂಕು ಕಾರ್ಯದರ್ಶಿ ಎ.ಎಸ್.ಸುರೇಶ್ ಮಾತನಾಡಿ, ಸವಿತ ಸಮಾಜದ ನಿಗಮದಿಂದ ಹಿಂದುಳಿದ ನಮ್ಮ ಜನಾಂಗದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕು. ಸ್ವಯಂ ಉದ್ಯೋಗಕ್ಕಾಗಿ ಸಾಲದ ಮೊತ್ತವನ್ನು 10 ಲಕ್ಷಕ್ಕೆ ಏರಿಸಬೇಕು ಎಂದು ಮನವಿ ಮಾಡಿದರು.12ನೇ ಶತಮಾನದ ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣರ ಸಾಮಾಜಿಕ ಕಾರ್ಯಗಳಲ್ಲಿ ಹಡಪದ ಅಪ್ಪಣ್ಣ ಪ್ರಮುಖ ಪಾತ್ರ ವಹಿಸಿದ್ದರು. ಅವರ ತತ್ವಾದರ್ಶ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಹಡಪದ ಅಪ್ಪಣ್ಣ ವೃತ್ತಿಯಲ್ಲಿ ಕ್ಷೌರಿಕನಾದರೂ ತಮ್ಮ ಕಾಯಕದಲ್ಲಿ ತೃಪ್ತಿ ಕಂಡಿದ್ದರು. ಕಾಯಕವೇ ದೇವರು ಎಂದು ಭಾವಿಸಿದ್ದರು. ಅಂಬಿಗ ಚೌಡಯ್ಯ, ಮಾದಾರಚನ್ನಯ್ಯ, ಹರಳಯ್ಯ ಇತರ ಶರಣರಂತೆ ತಾವು ಇಷ್ಟಲಿಂಗ ಪೂಜೆ ಮಾಡುತ್ತಿದ್ದರು. ಜಾತಿ, ಧರ್ಮ, ಮತ ಪಂಗಡಗಳನ್ನು ಮೀರಿದ ಜೀವನ ಅವರದ್ದಾಗಿತ್ತು ಎಂದರು.
ನಮ್ಮ ಕುಲಕಸುಬಾದ ಡೋಲು ಮತ್ತು ನಾದಸ್ವರ ವಾದಕರಿಗೆ ಉಚಿತ ತರಬೇತಿ ಶಿಕ್ಷಣವನ್ನು ನೀಡಬೇಕು. ಜೊತೆಗೆ ಜಿಲ್ಲೆಗೊಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.ಸವಿತ ಸಮಾಜದ ಮುಖಂಡರಾದ ವೆಂಕಟಾಚಲಯ್ಯ, ಅಪ್ಪಣ್ಣ, ಹರಿದಾಸ್, ಪುಟ್ಟಸ್ವಾಮಿ, ಸತೀಶ್, ಚಂದ್ರಶೇಖರ್, ರವಿ, ಪುಟ್ಟಸ್ವಾಮಿ, ರಮೇಶ್, ನಿಂಗರಾಜು, ಲಕ್ಷ್ಮಣ್, ಜಗದೀಶ್, ರಾಜೀವ್, ನಾಗೇಶ್, ಕುಮಾರ್ ಸೇರಿದಂತೆ ಹಲವರಿದ್ದರು.