ಉತ್ತರ ಕನ್ನಡದಲ್ಲಿ ಎಚ್‌ಎಸ್‌ಆರ್‌ಪಿಗೆ ನಿರಾಸಕ್ತಿ

| Published : Feb 09 2024, 01:48 AM IST

ಸಾರಾಂಶ

ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಫೆ. ೧೭ ಕೊನೆಯ ದಿನವಾಗಿದೆ. ಆದರೆ ಜಿಲ್ಲೆಯಲ್ಲಿ ಹೆಚ್ಚಿನ ವಾಹನಗಳ ಮಾಲೀಕರು ಇನ್ನೂ ಎಚ್‌ಎಸ್‌ಆರ್‌ಪಿ ನೋಂದಣಿಗೆ ಆಸಕ್ತಿ ತೋರುತ್ತಿಲ್ಲ.

ಜಿ.ಡಿ. ಹೆಗಡೆಕಾರವಾರ:ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಫೆ. ೧೭ ಕೊನೆಯ ದಿನವಾಗಿದೆ. ಆದರೆ ಜಿಲ್ಲೆಯಲ್ಲಿ ಹೆಚ್ಚಿನ ವಾಹನಗಳ ಮಾಲೀಕರು ಇನ್ನೂ ಎಚ್‌ಎಸ್‌ಆರ್‌ಪಿ ನೋಂದಣಿಗೆ ಆಸಕ್ತಿ ತೋರುತ್ತಿಲ್ಲ.ಜಿಲ್ಲೆಯಲ್ಲಿ ಭಾರಿ ವಾಹನ, ನಾಲ್ಕು ಚಕ್ರ, ದ್ವಿಚಕ್ರ ಸೇರಿದಂತೆ ೨೦೧೯ಕ್ಕಿಂತ ಮೊದಲು ಖರೀದಿಯಾಗಿರುವ ಲಕ್ಷಾಂತರ ವಾಹನಗಳಿವೆ. ಇದುವರೆಗೂ ಶೇ. ೨೦ರಷ್ಟು ಎಚ್‌ಎಸ್‌ಆರ್‌ಪಿ ನೋಂದಣಿಯಾಗಿಲ್ಲ. ರಸ್ತೆಯ ಮೇಲೆ ಸಾಗುವ ಯಾವುದೇ ಹಳೆಯ ವಾಹನ ನೋಡಿದರೂ ಬಹುತೇಕ ವಾಹನಗಳ ನಂಬರ್ ಪ್ಲೇಟ್ ಬದಲಾಗಿಲ್ಲ. ೨೦೨೩ ನವೆಂಬರ್‌ ಒಳಗೆ ನೋಂದಣಿ ಮಾಡಿಸಿಕೊಳ್ಳಲು ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ ಆ ಅವಧಿಯಲ್ಲಿ ಎಲ್ಲ ವಾಹನಗಳ ಮಾಲೀಕರಿಗೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಫೆ. ೧೭, ೨೦೨೪ಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಕೊನೆಯ ದಿನಾಂಕ ಸಮೀಪಿಸುತ್ತಿದ್ದರೂ ಹೊಸ ನೋಂದಣಿಯ ಬಗ್ಗೆ ಹೆಚ್ಚಿನ ಮಾಲೀಕರು ಆಸಕ್ತಿ ತೋರುತ್ತಿಲ್ಲ. ಪೊಲೀಸ್ ಅಥವಾ ಪ್ರಾದೇಶಿಕ ಸಾರಿಗೆ ಇಲಾಖೆಯಾಗಲಿ (ಆರ್‌ಟಿಒ) ಎಚ್‌ಎಸ್‌ಆರ್‌ಪಿ ನೋಂದಣಿಯ ಬಗ್ಗೆ ಹೆಚ್ಚಿನ ಪ್ರಚಾರ ನೀಡುತ್ತಿಲ್ಲ. ಈ ನೋಂದಣಿಯ ಅಗತ್ಯತೆ, ಕೊನೆಯ ದಿನಾಂಕ ಒಳಗೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿದ್ದರೆ ವಾಹನಗಳ ಮಾಲೀಕರು ತುಸು ಎಚ್ಚೆತ್ತುಕೊಂಡು ಹೊಸ ನಂಬರ್ ಪ್ಲೇಟ್ ಪಡೆದುಕೊಳ್ಳಲು ಮುಂದಾಗುತ್ತಿದ್ದರು. ಕೆಲವೇ ಕೆಲವು ವಾಹನಗಳ ಮಾಲೀಕರಿಗೆ ಈ ಬಗ್ಗೆ ತಿಳಿದಿದ್ದರೆ ಹಲವು ಮಾಲೀಕರಿಗೆ ಇದುವರೆಗೂ ತಿಳಿದಿಲ್ಲ. ಜತೆಗೆ ಎಲ್ಲಿ ನೋಂದಣಿ ಮಾಡಿಸಬೇಕು? ಹೇಗೆ ಮಾಡಿಸಬೇಕು? ದಾಖಲೆಗಳು ಏನು ಬೇಕು? ಎಷ್ಟು ಹಣ ಪಾವತಿಸಬೇಕು? ಎನ್ನುವ ಬಗ್ಗೆಯೂ ಗೊಂದಲಗಳಿವೆ. ದಶಕಗಳಿಂದ ಭಾರತದಲ್ಲಿ ದ್ವಿಚಕ್ರ ವಾಹನ ತಯಾರಿಸಿಕೊಂಡು ಬಂದಿದ್ದ ಹಿರೋಹೊಂಡಾ ಕಂಪನಿ ಬೇರೆ ಬೇರೆಯಾಗಿದ್ದು, ಹಿರೋಹೊಂಡಾ ಎಂದಿರುವ ದ್ವಿಚಕ್ರ ವಾಹನವನ್ನು ಹಿರೋ ಕಂಪನಿಯಲ್ಲಿ ನೋಂದಣಿ ಮಾಡಿಸಬೇಕೇ? ಹೊಂಡಾ ಕಂಪನಿಯಲ್ಲಿ ನೋಂದಣಿ ಮಾಡಿಸಬೇಕೆ ಎನ್ನುವ ಬಗ್ಗೆ ಗ್ರಾಹಕರಲ್ಲಿ ಸ್ಪಷ್ಟತೆಯಿಲ್ಲ.ಉತ್ತರ ಕನ್ನಡದಲ್ಲಿ ಕಾರವಾರ, ಹೊನ್ನಾವರ, ಶಿರಸಿ, ದಾಂಡೇಲಿ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಕಚೇರಿಗಳಿವೆ. ಆಯಾ ವಾಹನಗಳ ಕಂಪನಿಯ ಶೋ ರೂಮ್ ಅಥವಾ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಎಷ್ಟು ವಾಹನಗಳು ನೊಂದಣಿಯಾಗಿದೆ? ಎಷ್ಟು ನೋಂದಣಿಯಾಗಿಲ್ಲ ಎಂದು ತಿಳಿದುಕೊಳ್ಳಲು ಕೂಡಾ ಯಾವುದೇ ವ್ಯವಸ್ಥೆಯನ್ನು ಸರ್ಕಾರ ಮಾಡಿಲ್ಲ. ಎಚ್‌ಎಸ್‌ಆರ್‌ಪಿ ನೋಂದಣಿಗೆ ಸರ್ಕಾರ ಮತ್ತಷ್ಟು ಕಾಲವಕಾಶ ನೀಡುತ್ತದೆಯೇ ಅಥವಾ ದಂಡ ವಿಧಿಸಲು ಪ್ರಾರಂಭಿಸುತ್ತದೆಯೇ ಎನ್ನುವುದನ್ನು ನೋಡಬೇಕಿದೆ.ಆರ್‌ಟಿಒ ಅಧಿಕಾರಿಗಳಿಗೂ ಎಚ್‌ಎಸ್‌ಆರ್‌ಪಿ ನೋಂದಣಿಗೂ ಸಂಬಂಧವೇ ಇಲ್ಲ. ಸರ್ಕಾರ ಯಾವುದೇ ಅಧಿಕಾರವನ್ನೂ ನೀಡಿಲ್ಲ. ಶೋ ರೂಮ್‌ನಲ್ಲಿ, ಆನ್‌ಲೈನ್‌ನಲ್ಲಿ ಮಾತ್ರ ಮಾಡಿಸಲು ಅವಕಾಶವಿದೆ. ಕಾರವಾರದಲ್ಲಿ ಕಾರಿನ ಅಥವಾ ಭಾರಿ ವಾಹನದ ಶೋ ರೂಮ್ ಇಲ್ಲವೇ ಇಲ್ಲ. ಅಂಥವರು ಏನು ಮಾಡಬೇಕು? ಹಳೆಯ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಏಕೆ ಬೇಕು? ಸರ್ಕಾರ ಅನಗತ್ಯವಾಗಿ ಜನರಿಂದ ಸುಲಿಗೆ ಮಾಡುತ್ತಿದೆ ಕಾರವಾರ-ಅಂಕೋಲಾ ಡ್ರೈವಿಂಗ್ ಸ್ಕೂಲ್ ಅಧ್ಯಕ್ಷ ರಾಘು ನಾಯ್ಕ ಹೇಳಿದರು.