ಸಾರಾಂಶ
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವಿದ್ಯುತ್, ಕುಡಿಯುವ ನೀರು, ರೈಲ್ವೆ ಲೈನ್ , ರಸ್ತೆ , ಕಳ್ಳತನ ಆಗುವ ಕುರಿತು ಹಾಗೂ ಬಿಆರ್‌ಟಿಎಸ್ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
ಹುಬ್ಬಳ್ಳಿ:
ನಗರದಲ್ಲಿರುವ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಅಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಿ ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರ ದೂರುಗಳನ್ನು ಆಲಿಸಿದ ಶಾಸಕರು, ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಯಿಂದ ಪ್ರತಿಯೊಂದು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪೂರಕ ಉತ್ತರ ಪಡೆದು, ಶೀಘ್ರವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವಿದ್ಯುತ್, ಕುಡಿಯುವ ನೀರು, ರೈಲ್ವೆ ಲೈನ್ , ರಸ್ತೆ , ಕಳ್ಳತನ ಆಗುವ ಕುರಿತು ಹಾಗೂ ಬಿಆರ್‌ಟಿಎಸ್ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿದ ಶಾಸಕರು, ದಸರಾ ಮುಗಿದ ಬಳಿಕ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಿಗದಿಪಡಿಸುವಂತೆ ಕಾರ್ಯದರ್ಶಿ ಕೆ.ಬಿ. ಮೇರುನಂದನ್‌ಗೆ ಸೂಚಿಸಿದರು.
ಮಹಾನಗರ ಪಾಲಿಕೆ, ಎಲ್ ಆ್ಯಂಡ್ ಟಿ, ಹೆಸ್ಕಾಂ, ಪೊಲೀಸ್ ಇಲಾಖೆ, ಬಿಆರ್‌ಟಿಎಸ್ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿ, ಮುಂದಿನ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.ಈ ವೇಳೆ ವರ್ತಕರ ಸಂಘದ ಅಧ್ಯಕ್ಷ ರಾಜಣ್ಣ ಮೆಣಸಿನಕಾಯಿ, ಅಹಾರಧಾನ್ಯ ಸಂಘದ ಅಧ್ಯಕ್ಷ ಮಲ್ಲಣ್ಣ ಬೊರಟ್ಟಿ, ಉಪಾಧ್ಯಕ್ಷ ಬಾಳಿಕಾಯಿ, ಮಾಜಿ ಅಧ್ಯಕ್ಷ ಬಸವರಾಜ ಯಕಲಾಸಪುರ, ಕಾರ್ಯದರ್ಶಿ ಕೆ.ಬಿ. ಮೇರುನಂದನ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ವರ್ತಕರು ಉಪಸ್ಥಿತರಿದ್ದರು.