ಸಾರಾಂಶ
ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಕಾಯ್ದೆಯಡಿಯಲ್ಲಿ ೮೫,೭೫೭ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ ಶೇ. ೭೨ರಷ್ಟು ಅರ್ಜಿಗಳಿಗೆ ಅಸಮರ್ಪಕವಾಗಿ ಜಿಪಿಎಸ್ ಮಾಡಲಾಗಿದೆ.
ಭಟ್ಕಳ: ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿ ಕಾನೂನಿಗೆ ವ್ಯತಿರಿಕ್ತವಾಗಿ ನಡೆದ ಅಸಮರ್ಪಕ ಜಿಪಿಎಸ್‌ಗೆ ಅರಣ್ಯವಾಸಿಯು ಹಕ್ಕು ಸಮಿತಿಯ ಪ್ರಾಧಿಕಾರಕ್ಕೆ ಸಲ್ಲಿಸಿದ ಮೇಲ್ಮನವಿ ಪುನರ್ ಪರಿಶೀಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದರು.
ತಾಲೂಕಿನಲ್ಲಿ ಭಾನುವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಪ್ರಾಧಿಕಾರಕ್ಕೆ ಸಲ್ಲಿಸಲಾದ ಅಸಮರ್ಪಕ ಜಿಪಿಎಸ್ ಮೇಲ್ಮನವಿಯ ಸ್ವೀಕೃತಿ ಪ್ರತಿಯನ್ನು ಅರಣ್ಯವಾಸಿಗಳಿಗೆ ವಿತರಿಸಿ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯ ಮಂಜೂರಿ ಪ್ರಕ್ರಿಯೆಯಲ್ಲಿ ಅರಣ್ಯವಾಸಿಯ ಸಾಗುವಳಿ ನಿರ್ದಿಷ್ಟ ಗಡಿ ನಿರ್ಧರಿಸುವ ಉದ್ದೇಶದಿಂದ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಯ ನೇತೃತ್ವದಲ್ಲಿ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಜಿಪಿಎಸ್ ಕಾರ್ಯ ನಡೆದಿತ್ತು. ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಕಾಯ್ದೆಯಡಿಯಲ್ಲಿ ೮೫,೭೫೭ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.ಅವುಗಳಲ್ಲಿ ಶೇ. ೭೨ರಷ್ಟು ಅರ್ಜಿಗಳಿಗೆ ಅಸಮರ್ಪಕವಾಗಿ ಜಿಪಿಎಸ್ ಮಾಡಲಾಗಿದೆ. ಸಾಗುವಳಿ ಕ್ಷೇತ್ರ, ಬಾವಿ, ಅಂಗಳ, ಕೊಟ್ಟಿಗೆ ಮುಂತಾದವುಗಳನ್ನು ಬಿಟ್ಟು ಜಿಪಿಎಸ್ ಆಗದಿರುವುದರಿಂದ ಅನ್ಯಾಯಕ್ಕೊಳಗಾದ ಅರಣ್ಯವಾಸಿಗಳು ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಹರಿ ನಾಯ್ಕ, ಓಂಕಾರ, ಶಬ್ಬೀರ್, ಖಯ್ಯೂಂ ಕೋಲಾ, ಮಂಜುನಾಥ ನಾಯ್ಕ, ದೇವು ಗೋಮ ಮರಾಠಿ, ಅಣ್ಣಪ್ಪ ನಾಯ್ಕ, ಮಂಜುನಾಥ ಹಾಡುಹಳ್ಳಿ, ದತ್ತು ನಾಯ್ಕ, ಮೋಹನ ಸಣ್ಣು ಗೊಂಡ, ಮಂಗಲಾ ಶೆಟ್ಟಿ ಗುಡಿಹಿತ್ಲು ಮುಂತಾದವರಿದ್ದರು.