ದುಡಿಮೆ ಇಲ್ಲದೇ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಆಸ್ಪತ್ರೆ ಖರ್ಚುವೆಚ್ಚ ನೀಗಿಸುವುದು ತುಂಬಾ ಕಷ್ಟವಾಗುತ್ತಿದೆ.
ಶಿರಹಟ್ಟಿ: ಮರಳು ಸರಬರಾಜಿಗೆ ಇರುವ ಸಮಸ್ಯೆ ಬಗೆಹರಿಸಿ ನಿತ್ಯ ಮರಳು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವೇಳೆ ಕಾರ್ಮಿಕ ಸಂಘಟನೆಯವರು ಮಾತನಾಡಿ, ತಾಲೂಕಿನಲ್ಲಿ ಯಾವುದೇ ಉದ್ಯಮ, ಕೈಗಾರಿಕೆಗಳಿಲ್ಲ. ಕೂಲಿ ಕೆಲಸ ಮಾಡಿಯೇ ಜೀವನ ನಡೆಸಬೇಕಿದೆ. ಸಾವಿರಾರು ಕುಟುಂಬಗಳು ಗೌಂಡಿ ಕೆಲಸ ಮಾಡಿಕೊಂಡು ನಿತ್ಯ ಜೀವನ ನಡೆಸುತ್ತಿದ್ದು, ಕಳೆದ ಎರಡು ತಿಂಗಳಿನಿಂದ ತಾಲೂಕಿಗೆ ಮರಳು ಪೂರೈಕೆಯಾಗದೇ ಇರುವುದರಿಂದ ದುಡಿಮೆ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ ಎಂದರು.
ದುಡಿಮೆ ಇಲ್ಲದೇ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಆಸ್ಪತ್ರೆ ಖರ್ಚುವೆಚ್ಚ ನೀಗಿಸುವುದು ತುಂಬಾ ಕಷ್ಟವಾಗುತ್ತಿದೆ. ನಾವು ಯಾರನ್ನು ಭಿಕ್ಷೆ ಬೇಡುತ್ತಿಲ್ಲ. ದುಡಿದು ತಿನ್ನುತ್ತೇವೆ. ನಮ್ಮ ದುಡಿಮೆಗೆ ಗೌಂಡಿ ಕೆಲಸಕ್ಕೆ ಮುಖ್ಯವಾಗಿ ಉಸುಕು(ಮರಳು) ಬೇಕಿದ್ದು, ಸರ್ಕಾರ ಮತ್ತು ಅಧಿಕಾರಿಗಳ ಕಿತ್ತಾಟದಿಂದಾಗಿ ದುಡಿಯುವ ವರ್ಗ ನೋವು ಅನುಭವಿಸುತ್ತಿದ್ದು, ಕೂಡಲೇ ಮರಳು ಸರಬರಾಜಿಗೆ ಅನುಮತಿ ನೀಡಿ ದುಡಿಮೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.ಅವೈಜ್ಞಾನಿಕ ಮರಳು ನೀತಿಯಿಂದ ಬಡ ಕೂಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದಕ್ಕೆ ಬ್ರಿಟಿಷ್ ರೀತಿಯ ಆಡಳಿತ ನಡೆಸುತ್ತಿರುವ ಅಧಿಕಾರಿಗಳು ಮತ್ತು ಬಡ ಜನತೆಯನ್ನು ಮರೆತ ಜನಪ್ರತಿನಿಧಿಗಳು ಕಾರಣ ಎಂದು ದೂರಿದರು. ತಾಲೂಕಿನಲ್ಲಿ ಸಾವಿರಾರು ಜನರು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕಾಮಗಾರಿಗಳಲ್ಲಿ ತೊಡಗಿಕೊಂಡಿದ್ದಾರೆ. ಸರ್ಕಾರದ ಅವೈಜ್ಞಾನಿಕ ಮರಳು ನೀತಿಯಿಂದಾಗಿ ಈ ಕಾರ್ಮಿಕರು ದುಡಿಮೆ ಇಲ್ಲದೇ ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ ಎಂದರು.ತಾಲೂಕಿನ ಹೊಳೆ-ಇಟಗಿ, ಹೆಬ್ಬಾಳ, ತಂಗೋಡ, ತೊಳಲಿ, ಕಲ್ಲಾಗನೂರ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಹೇರಳವಾಗಿ ಮರಳು ದೊರೆಯುತ್ತಿದ್ದು, ಮರಳು ಸಾಗಾಣಿಕೆಗೆ ಇರುವ ಕಠಿಣ ಕಾನೂನು ಸಡಿಲಿಸಿ ಸರಳ ನಿಯಮಾನುಸಾರ ಅಡ್ಡಿ ಆತಂಕ ಬರದಂತೆ ದುಡಿಯುವ ಕಾರ್ಮಿಕ ವರ್ಗಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ನಿತ್ಯ ಜೀವನ ಸಾಗಿಸುವುದು, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಜೋಡಣೆ ಮಾಡುವುದು ಕಷ್ಟವಾಗುತ್ತಿದೆ ಎಂದರು.ಮರಳು ದೊರೆಯದೇ ಇರುವುದರಿಂದ ಸರ್ಕಾರಿ ಕೆಲಸ, ಮನೆಗಳ ನಿರ್ಮಾಣ, ಸಮುದಾಯ ಭವನಗಳ ಕಾಮಗಾರಿ, ದೇವಸ್ಥಾನಗಳ ನಿರ್ಮಾಣ, ಸಿಸಿ ರಸ್ತೆ, ಚರಂಡಿ ಕೆಲಸ ಸ್ಥಗಿತವಾಗಿವೆ. ಸಮರ್ಪಕ ಮರಳು ಪೂರೈಕೆಯಾಗದೇ ಇರುವುದರಿಂದ ಸರ್ಕಾರಿ ಅಭಿವೃದ್ಧಿ ಕೆಲಸ ಕಾರ್ಯಕ್ಕೂ ಹಿನ್ನಡೆಯಾಗುತ್ತಿದೆ. ಇದರಿಂದ ದುಡಿಯುವ ಕಾರ್ಮಿಕ ವರ್ಗ ಕೂಡ ಕೆಲಸವಿಲ್ಲದೇ ನಿತ್ಯ ಕಷ್ಟದ ಜೀವನ ನಡೆಸುವಂತಾಗಿದೆ ಎಂದರು.ಕಟ್ಟಡ ನಿರ್ಮಾಣಕ್ಕೆ ಮರಳು ಇಲ್ಲದೆ ನಿರ್ಮಾಣ ಕಾರ್ಯವೆಲ್ಲ ಸ್ಥಗಿತಗೊಂಡಿವೆ. ಎರಡು ತಿಂಗಳಾದರೂ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ಸಮರ್ಪಕ ನಿರ್ಧಾರ ಕೈಗೊಂಡಿಲ್ಲ. ಮುಂದಾದರೂ ಅವೈಜ್ಞಾನಿಕ ಮರಳು ನೀತಿ ಕೈಬಿಟ್ಟು ಮರಳು ಸಮರ್ಪಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಬರೀ ಆಶ್ವಾಸನೆ ನೀಡಿ ಸಮಾಧಾನಪಡಿಸಿದರೆ ಸಾಲದು. ಬಡ ಕೂಲಿ ಕಾರ್ಮಿಕರ ಅಳಲು ತಿಳಿದು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೆಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಡ ಕೂಲಿ ಕಾರ್ಮಿಕರ ಕಷ್ಟ, ನೋವು ಗಮನಿಸಿ ಮರಳು ಸಾಗಾಣಿಕೆಗೆ ಇರುವ ಅಡೆತಡೆ ಬಗೆಹರಿಸಿ ಸಮರ್ಪಕ ಮರಳು ಪೂರೈಕೆಗೆ ಮುಂದಾಗಬೆಕು ಎಂದು ಶಿರಹಟ್ಟಿ ತಾಲೂಕು ಸಮಸ್ತ ಕಾರ್ಮಿಕ ಸಂಘಟನೆ ವತಿಯಿಂದ ಲಿಖಿತ ಮನವಿ ನೀಡಿ ಆಗ್ರಹಿಸಿದರು.ಮನವಿ ಸಲ್ಲಿಸುವ ಸಂದರ್ಭದಲ್ಲಿ ರಮೇಶ್ ಗುಡಿಮನಿ, ಗೂಡುಸಾಬ ಚೋರಗಸ್ತಿ, ಕಲಂದರ್ ಕಬಾಡಿ, ಇಸಾಕಮ್ಮದ್ ಬೈರಕದಾರ್, ಜಗದೀಶ್ ಇಟ್ಟೆ ಕಾರ್, ಗರೀಬ್ ಸಾಬ್ ಅಂಗಡಿ, ಫಕ್ರುಸಾಬ್ ಕಳ್ಳಿಮನಿ, ದಾದಾಪೀರ್ ಮುಳಗುಂದ್, ದಸ್ತಗಿರಸಾಬ್ ಜಂಗಿ, ರಿಯಾಜ್ ಟಕ್ಕೇದ, ರಫೀಕ್ ಕಳ್ಳಿಮನಿ, ಗುಲಾಬಸಾಬ್ ಶಿಗ್ಲಿ, ಬಾಬುಸಾಬ ಕಬಾಡಿ, ಮಹಾಂತೇಶ ಹುಲಕಡ್ಡಿ ಇತರರು ಇದ್ದರು.