ಪಪಂ ಕಾರ್ಯಾಲಯದ ಕಟ್ಟಡದ ಚಾವಣಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಸರ್ಕಾರ ತುರ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಪಪಂ ಕಾರ್ಯಾಲಯದ ಕಟ್ಟಡದ ಚಾವಣಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಸರ್ಕಾರ ತುರ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿಕರ್ನಾಟಕ ಪ್ರಜಾಪರ ವೇದಿಕೆಯಿಂದ ಮಂಗಳವಾರ ತಹಸೀಲ್ದಾರ ಮೂಲಕ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಹಸನ್ ತಹಶೀಲ್ದಾರ ಮಾತನಾಡಿ, ಸುಮಾರು ೧೨೦ ವರ್ಷಗಳ ಹಳೆದ ಶಿಥಿಲಗೊಂಡ ಕಟ್ಟಡದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದರಿಂದ ಸುರಕ್ಷತೆಯ ಬಗ್ಗೆಯೂ ಪ್ರಶ್ನೆ ಮೂಡಿದೆ.

ಕಟ್ಟಡವನ್ನು ದುರಸ್ತಿ ಮಾಡುವ ಬದಲು ಅಗತ್ಯವಿದ್ದಲ್ಲಿ ತಾಂತ್ರಿಕ ಪರಿಶೀಲನೆ ನಡೆಸಿ, ಹೊಸ ಪಪಂ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಳೆಗಾಲದಲ್ಲಿ ದಾಖಲೆಗಳು ನಾಶವಾಗುವ ಮುನ್ನ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿ, ತಾತ್ಕಾಲಿಕವಾಗಿ ದಾಖಲೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದರ ಜೊತೆಗೆ ಶೀಘ್ರವೇ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಪಪಂ ಕಾರ್ಯಾಲಯವು ಸುಮಾರು ೧೨೦ ವರ್ಷಗಳ ಹಳೆಯ ಸಾಂಗ್ಲಿ ಸಂಸ್ಥಾನದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಮೇಲ್ಛಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಕಚೇರಿಯಲ್ಲಿರುವ ಪ್ರಮುಖ ದಾಖಲೆಗಳು ಹಾಗೂ ಕಡತಗಳು ಹಾನಿಗೊಳಗಾಗುವ ಆತಂಕ ಎದುರಾಗಿದೆ.

ಕಚೇರಿ ಕೆಲಸಕ್ಕಾಗಿ ಪ್ರತಿನಿತ್ಯ ಆಗಮಿಸುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯೂ ಇಲ್ಲದೆ ಪರದಾಡುವಂತಾಗಿದೆ. ಕಚೇರಿಯ ಮೂಲಸೌಕರ್ಯಗಳ ಕೊರತೆಯಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಳೆಯ ಕಟ್ಟಡದ ಸ್ಥಿತಿಗತಿಯನ್ನು ತಜ್ಞರಿಂದ ಪರಿಶೀಲಿಸಿ, ಅಪಾಯಕಾರಿಯಾಗಿದ್ದರೆ ಶೀಘ್ರವೇ ತೆರವುಗೊಳಿಸಿ ಸಕಲ ಮೂಲಸೌಕರ್ಯಗಳನ್ನೊಳಗೊಂಡ ನೂತನ ಪಟ್ಟಣ ಪಂಚಾಯಿತಿ ಕಾರ್ಯಾಲಯ ಕಟ್ಟಡ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ದಾಖಲೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕುರಿತು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಂತರ ತಹಸೀಲ್ದಾರ ಹಾಗೂ ಪಪಂ ಆಡಳಿತಾಧಿಕಾರಿಯೂ ಆಗಿರುವ ಕೆ. ರಾಘವೇಂದ್ರ ರಾವು ಮನವಿ ಸ್ವೀಕರಿಸಿದರು. ಈ ವೇಳೆ ಅಜ್ಜಪ್ಪ ಬಿಡವೆ, ಶರೀಫ ಗುಡಿಮನಿ, ಶಿವಾನಂದ ಸುಲ್ತಾನಪೂರ, ಮಂಜುನಾಥ ಲಮಾಣಿ, ಎಂ.ಎಂ. ಮೂರಶಿಳ್ಳಿ, ಸಾಧಿಕ ಮುಳಗುಂದ, ಪೂಜಾರ ಮುಂತಾದವರಿದ್ದರು.