ಮಾರಿಕಾಂಬಾ ದೇವಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಬಿಜೆಪಿ ನಗರ ಘಟಕದಿಂದ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿರಸಿ
ಮಾರಿಕಾಂಬಾ ದೇವಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಬಿಜೆಪಿ ನಗರ ಘಟಕದಿಂದ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಬಿಜೆಪಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ನೇತೃತ್ವದಲ್ಲಿ ಸಹಾಯಕ ಆಯುಕ್ತರು, ತಹಸೀಲ್ದಾರ, ಪೌರಾಯುಕ್ತರನ್ನು ಭೇಟಿಯಾಗಿ, ಫೆ. 24ರಂದು ಶಿರಸಿ ಮಾರಿಕಾಂಬಾ ಜಾತ್ರೆಯು ಪ್ರಾರಂಭವಾಗಲಿದ್ದು, ಲಕ್ಷಾಂತರ ಭಕ್ತಾಧಿಗಳು ಶಿರಸಿಗೆ ಆಗಮಿಸುತ್ತಾರೆ. ಅವರಿಗೆ ಸೂಕ್ತವಾದ ಮೂಲಭೂತ ಸೌಕರ್ಯ ಒದಗಿಸುವುದು ಜಿಲ್ಲಾಡಳಿತ ಮತ್ತು ತಾಲೂಕಾಡಳತದ ಕರ್ತವ್ಯವಾಗಿದೆ. ಕುಡಿಯುವ ನೀರು, ಶೌಚಾಲಯ ಮತ್ತು ವಸತಿಗೃಹದ ವ್ಯವಸ್ಥೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ದೇವಿ ಜಾತ್ರೆಗೆ ಬರುವ ಆದಿವಾಸಿ ಹಕ್ಕಿ-ಪಿಕ್ಕಿ ಜನಾಂಗದವರಿಗೆ ವ್ಯವಹಾರಕ್ಕೆ ಜಾಗ ನೀಡುವುದರ ಜೊತೆಗೆ ಅವರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಜಾತ್ರೆಯ ವೇಳೆ ಸ್ವಚ್ಛತಾ ದೃಷ್ಟಿಯಿಂದ ಹಗಲಿರುಳು ದುಡಿಯುವ ನಮ್ಮ ಪೌರಕಾರ್ಮಿಕರಿಗೆ ಅತಿ ಹೆಚ್ಚಿನ ಸಹಾಯ ಮತ್ತು ಸಹಕಾರ ದೊರೆಯಬೇಕು. ಪ್ರತಿ ಬಾರಿ ವಾಹನ ಸಂಚಾರ ದಟ್ಟನೆ ನಿಯಂತ್ರಿಸಲು ಸರ್ಕಾರಿ ಬಸ್ಸುಗಳಲ್ಲಿ ಬರುವ ಭಕ್ತಾದಿಗಳಿಗೆ ಶ್ರೀದೇವಿ ಗದ್ದುಗೆ ಹತ್ತಿರವಾಗುವ ಐದು ರಸ್ತೆ ಸರ್ಕಲ್ ನ ರಾಯಪ್ಪ ಶಾಲೆಯ ಎದುರು ಪ್ರಯಾಣಿಕರನ್ನು ಇಳಸುವ ವ್ಯವಸ್ಥೆ ಆಗುತ್ತಿತ್ತು. ಆದರೆ ಈ ಜಾತ್ರೆಗೆ ಅಲ್ಲಿ ಸ್ಥಳಾವಕಾಶ ಇಲ್ಲ. ಈ ಬಗ್ಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಳ ನೀಡಿ ಮೊದಲೇ ಸೂಚಿಸಬೇಕು. ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರಿಗೆ ಜೊತೆ ಅಧಿಕಾರಿಗಳು ದುರ್ವರ್ತನೆ ಅಥವಾ ದರ್ಪ ತೋರದೆ ಸಂಯಮದಿಂದ ನಡೆದುಕೊಳ್ಳಲು ಮೇಲಿನ ಅಧಿಕಾರಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು. ಎಲ್ಲ ವಿಷಯಗಳ ಬಗ್ಗೆ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪತ್ರಿಕಾ ಪ್ರಕಟಣೆ ಹಾಗೂ ಸೂಚನಾ ಫಲಕ ಅಳವಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಮಹಾಂತೇಶ ಹಾದಿಮನಿ, ಪದಾಧಿಕಾರಿಗಳಾದ ನಂದನ ಸಾಗರ್, ಶ್ರೀಕಾಂತ ನಾಯ್ಕ, ಶರ್ಮಿಳಾ ಮಾದನಗೇರಿ, ರಮಕಾಂತ ಭಟ್, ರಾಘವೇಂದ್ರ ಶೆಟ್ಟಿ, ಡಾನಿ ಡಿಸೋಜಾ, ಶ್ರೀಕಾಂತ್ ಬಳ್ಳಾರಿ, ರಾಘವೇಂದ್ರ ಶೆಟ್ಟಿ, ನವೀನ ಶೆಟ್ಟಿ, ಆರ್‌ಎನ್‌ಟಿ ರವಿ, ರೇಖಾ ಹೆಗಡೆ ಕಂಪ್ಲಿ, ವೀಣಾ ಶೆಟ್ಟಿ, ನಗರಸಭಾ ಮಾಜಿ ಸದಸ್ಯರು ಹಾಗೂ ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು ಹಾಗೂ ಸಮಸ್ತ ಕಾರ್ಯಕರ್ತರು ಉಪಸ್ಥಿತರಿದ್ದರು.