ಏಮ್ಸ್‌ ಹೋರಾಟ ನಿಯೋಗದಿಂದ ಕೇಂದ್ರ ಸಚಿವ ಎಚ್‌ಡಿಕೆಗೆ ಮನವಿ

| Published : Jul 20 2024, 12:48 AM IST

ಸಾರಾಂಶ

ರಾಯಚೂರು ಜಿಲ್ಲಾ ಏಮ್ಸ್‌ ಹೋರಾಟ ಸಮಿತಿ ನಿಯೋಗ ದೆಹಲಿಯಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರ ಸ್ವಾಮಿರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ರಾಯಚೂರು: ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ರಾಯಚೂರಿನಲ್ಲಿಯೇ ಸ್ಥಾಪಿಸಬೇಕು ಎಂದು ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ನಿಯೋಗವು ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರ ಸ್ವಾಮಿಗೆ ಮನವಿ ಸಲ್ಲಿಸಿದೆ.

ನವದೆಹಲಿಯ ಕಾವೇರಿ ಭವನದಲ್ಲಿ ಎಚ್‌ಡಿಕೆರನ್ನು ಭೇಟಿಯಾದ ಏಮ್ಸ್‌ ಹೋರಾಟ ಸಮಿತಿ ನಿಯೋಗವು ರಾಯಚೂರು ಜಿಲ್ಲೆಯಲ್ಲಿ ಏಮ್ಸ್‌ಗಾಗಿ ನಡೆಯುತ್ತಿರುವ ಸುದೀರ್ಘ ಹೋರಾಟದ ಕುರಿತು ಮನವರಿಕೆ ಮಾಡಿಕೊಟ್ಟಿತು. ಐಐಟಿಯಿಂದ ವಂಚಿತಗೊಂಡ, ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ಸುಧೀರ್ಘ ಹೋರಾಟ ನಡೆಯುತ್ತಿದ್ದು, ಪ್ರಸಕ್ತ ಬಜೇಟನಲ್ಲಿ ಏಮ್ಸ್ ಘೋಷಿಸುವ ಬಗ್ಗೆ ಪ್ರಧಾನ ಮಂತ್ರಿ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಈ ವಿಚಾರವಾಗಿ ಪ್ರಧಾನಮಂತ್ರಿಯೊಂದಿಗೆ ಚರ್ಚಿಸಲಾಗುವುದು. ಅಲ್ಲದೇ ರಾಯಚೂರಿನಲ್ಲಿಯೇ ಏಮ್ಸ್‌ ಸ್ಥಾಪಿಸಿ ಜಿಲ್ಲೆ ಜನರ ಬಹುದಿನಗಳ ಬೇಡಿಕೆ ಈಡೇರಿಸಲಾಗುವುದು. ಆ ನಿಟ್ಟಿನಲ್ಲಿ ಕೇಂದ್ರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದೆಹಲಿ ಕಲ್ಯಾಣ ಕರ್ನಾಟಕ ಸಂಘದ ಅಧ್ಯಕ್ಷ ವೈಜನಾಥ ಬಿರಾದಾರ್, ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ, ಪದಾಧಿಕಾರಿಗಳಾದ ಅಶೋಕ ಕುಮಾರ ಜೈನ್‌, ವಿನಯ ಕುಮಾರ ಚಿತ್ರಗಾರ, ಅಮರೇಗೌಡ ಪಾಟೀಲ್‌, ಥಾಮಸ್‌ ಸೇರಿ ಇತರರು ಇದ್ದರು.