ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ರೈತರಿಂದ ಮನವಿ

| Published : Feb 21 2024, 02:02 AM IST

ಸಾರಾಂಶ

ಈಗ ಓಡಾಡಲು ಪರ್ಯಾಯ ಮಾರ್ಗವನ್ನು ಅಂಡರ್ ಬ್ರಿಜ್ ಮಾಡಲಾಗಿದೆ. ನೀವು ಕೇಳಿದಂತೆ ಎಲ್ ಸಿ (ನೆಲದ ಮೇಲೆ ಗೇಟ್ ) ನಿರ್ಮಾಣ ಮಾಡಲು ಸುರಕ್ಷತೆ ದೃಷ್ಠಿಯಿಂದ ಸಾಧ್ಯವಾಗುವುದಿಲ್ಲ. ಓವರ್ ಹೆಡ್ ಬ್ರಿಜ್ ನಿರ್ಮಾಣ ಮಾಡಲು ಕಾಲಾವಕಾಶಬೇಕು

ಕುಷ್ಟಗಿ: ತಾಲೂಕಿನ ನೆರೆಬೆಂಚಿ ಗ್ರಾಮದ ರೈತರು ರೈಲ್ವೆ ಕಾಮಗಾರಿ ನಡೆಯುವ ಜಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ರೈಲ್ವೆ ಅಧಿಕಾರಿ ಹಾಗೂ ತಹಸೀಲ್ದಾರಗೆ ಒತ್ತಾಯಿಸಿದ ಘಟನೆ ನಡೆಯಿತು.

ಕುಷ್ಟಗಿ ತಾಲೂಕಿನಲ್ಲಿ ಗದಗ-ವಾಡಿ ರೈಲ್ವೆ ಕಾಮಗಾರಿಯು ತ್ವರಿತಗತಿಯಲ್ಲಿ ನಡೆದಿದ್ದು, ಈಗಾಗಲೆ ಲಿಂಗನಬಂಡಿಯಿಂದ ಕುಷ್ಟಗಿಯವರೆಗೆ ಹಳಿ ಜೋಡಣೆ ಕಾರ್ಯವು ಆರಂಭವಾದ ಹಿನ್ನೆಲೆಯಲ್ಲಿ ಕುಷ್ಟಗಿ ಸಮೀಪದ ನೆರೆಬೆಂಚಿ ಗ್ರಾಮಸ್ಥರು ನಮ್ಮ ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ಮಾಡಿಕೊಡಬೇಕು ಎಂದು ಪ್ರತಿಭಟನೆ ನಡೆಸಿದರು.

ಈ ವೇಳೆ ತಹಸೀಲ್ದಾರ್‌ ಹಾಗೂ ರೈಲ್ವೆ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ ಗುರಿಕಾರ ಹಾಗೂ ಹುಬ್ಬೇಶ ಅಲಿ ಆದವಾನಿ ಮಾತನಾಡಿ, ನಮಗೆ ರೈಲ್ವೆ ಅಧಿಕಾರಿಗಳು ನಾಲ್ಕು ತಿಂಗಳ ಹಿಂದೆ ಮೇಲ್ಸೇತುವೆ ನಿರ್ಮಿಸಿ ಕೊಡುವದಾಗಿ ಭರವಸೆ ನೀಡಿದ್ದರು. ಆದ ಕಾರಣ ನಾವು ಕಾಮಗಾರಿ ಮಾಡಲು ಅವಕಾಶ ಕೊಡಲಾಗಿತ್ತು. ಈ ಹಿಂದೆ ಸಹಿತ ಸಂಸದರು ಹಾಗೂ ಶಾಸಕರ ಗಮನಕ್ಕೂ ಈ ವಿಷಯ ತಂದರು ಸಹಿತ ರೈಲ್ವೆ ಅಧಿಕಾರಿಗಳು ತಮಗೆ ತಿಳಿದ ಹಾಗೇ ಕೆಲಸ ಮಾಡುತ್ತಿದ್ದಾರೆ ಆದ ಕಾರಣ ನಮ್ಮ ವಾಹನಗಳ ಸಂಚಾರಕ್ಕಾಗಿ ಹೊಲಗಳಿಗೆ ಹೋಗಿ ಬರಲು ಮೇಲ್ಸೇತುವೆ ಅವಶ್ಯಕತೆ ಇದ್ದು ಮೇಲ್ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರೈಲ್ವೆ ಇಲಾಖೆಯ ಚಿಫ್ ಎಂಜಿನೀಯರ್ ಟಿ.ವೆಂಕಟೇಶರಾವ್ ಮಾತನಾಡಿ, ಈಗ ಓಡಾಡಲು ಪರ್ಯಾಯ ಮಾರ್ಗವನ್ನು ಅಂಡರ್ ಬ್ರಿಜ್ ಮಾಡಲಾಗಿದೆ. ನೀವು ಕೇಳಿದಂತೆ ಎಲ್ ಸಿ (ನೆಲದ ಮೇಲೆ ಗೇಟ್ ) ನಿರ್ಮಾಣ ಮಾಡಲು ಸುರಕ್ಷತೆ ದೃಷ್ಠಿಯಿಂದ ಸಾಧ್ಯವಾಗುವುದಿಲ್ಲ. ಓವರ್ ಹೆಡ್ ಬ್ರಿಜ್ ನಿರ್ಮಾಣ ಮಾಡಲು ಕಾಲಾವಕಾಶಬೇಕು. ಹೊಸದಾಗಿ ಕ್ರೀಯಾಯೋಜನೆ ಮಾಡಿ, ಭೂ ಖರೀದಿ ಮಾಡಬೇಕು. ಆದಾದ ನಂತರ ಟೆಂಡರ್ ಕರೆದು ಒವರ್ ಹೆಡ್ ಬ್ರಿಜ್ ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆ ನಿಮ್ಮ ಸಹಕಾರ ಹಾಗೂ ಕಾಲಾವಕಾಶಬೇಕು ನಾವುಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಪೋಸಲ್ ಕಳುಹಿಸುತ್ತೇವೆ ಆದಷ್ಟು ಶೀಘ್ರದಲ್ಲಿ ಮೇಲ್ಸೇತುವೆಯ ಕೆಲಸ ಮಾಡಿಕೊಡಲಾಗುತ್ತದೆ ಎಂದರು.

ತಹಸೀಲ್ದಾರ ರವಿ ಅಂಗಡಿ ಹಾಗೂ ಸಿಪಿಐ ಯಶವಂತ ಬಿಸನಳ್ಳಿ ಅವರು ಕಾಮಗಾರಿಗೆ ಸಾರ್ವಜನಿಕರು ಹಾಗೂ ರೈತರ ಸಹಕಾರ ಅಗತ್ಯವಾಗಿ ಬೇಕಾಗಿರುತ್ತದೆ. ರೈಲ್ವೆ ಅಧಿಕಾರಿಗಳು ನಿಮಗೆ ಮೇಲ್ಸೇತುವೆಯ ನಿರ್ಮಾಣದ ಕುರಿತು ಒಪ್ಪಿಗೆಯ ಪತ್ರ ಕೊಡುತ್ತಿದ್ದು ಈ ಪತ್ರವನ್ನು ಪಡೆದುಕೊಂಡು ಕಾಮಗಾರಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡರು.

ರೈಲ್ವೆ ಅಧಿಕಾರಿಗಳು ಮೇಲ್ಸೇತುವೆಯ ನಿರ್ಮಾಣದ ಕುರಿತು ಒಪ್ಪಿಗೆ ಪತ್ರವನ್ನು ರೈತರಿಗೆ ನೀಡಿದರು. ರೈತರು ಮೇಲ್ಸೇತುವೆಯ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್ ಐ ಮುದ್ದುರಂಗಸ್ವಾಮಿ, ತಹಸೀಲ್ದಾರ ರವಿ ಎಸ್ ಅಂಗಡಿ, ರೈಲ್ವೆ ಇಲಾಖೆಯ ಚಿಫ್ ಎಂಜೀನಿಯರ್ ಟಿ.ವೆಂಕಟೇಶರಾವ್, ಡೆಪ್ಯೂಟಿ ಚಿಫ್ ಎಂಜಿನಿಯರ್ ರವೀಂದ್ರ ಬಿರದಾರ್, ಎಇ ಅಶೋಕ ಕೆ ಎಂ, ನಂದಿಶ, ರೈತರಾದ ಬಸವರಾಜ ಗುರಿಕಾರ, ಹುಬ್ಬೇಶಅಲಿ ಆದವಾನಿ, ಮಾನಪ್ಪ ಗದ್ದಿ, ಶರಣಪ್ಪ ಹಿರೇಬಂಡಿಹಾಳ, ಬಸಪ್ಪ ಕಟ್ಟಿಹೊಲ, ದುಗ್ಗನಗೌಡ ಪೊಲೀಸ್ ಪಾಟೀಲ್, ಯಲ್ಲಪ್ಪ ಹಿರೇಬಂಡಿಹಾಳ, ಲಕ್ಷ್ಮವ್ವ ಟಕ್ಕಳಕಿ, ಬಾಲಪ್ಪ ಸಣ್ಣ ಬಂಡಿಹಾಳ, ಕಳಕಪ್ಪ ಪೊಲೀಸ್ ಪಾಟೀಲ್ ,ಹನುಮಂತ ಸೇರಿದಂತೆ ಇನ್ನಿತರ ರೈತರಿದ್ದರು.