ರಾಜ್ಯ ಸರ್ಕಾರದ್ದು ಸಾಹಿತ್ಯ, ಸಂಸ್ಕೃತಿ ವಿರೋಧಿ ನೀತಿ; ಎಬಿವಿಪಿ ಪ್ರತಿಭಟನೆ

| Published : Feb 21 2024, 02:02 AM IST

ರಾಜ್ಯ ಸರ್ಕಾರದ್ದು ಸಾಹಿತ್ಯ, ಸಂಸ್ಕೃತಿ ವಿರೋಧಿ ನೀತಿ; ಎಬಿವಿಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಈಗ ಮತ್ತೆ ವಸತಿ ಶಾಲೆಗಳಲ್ಲಿ ಕವಿ ಕುವೆಂಪುರ ವಾಕ್ಯ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ. ಎನ್ನುವ ಘೋಷಣೆಯನ್ನ ಬದಲಾವಣೆ ಮಾಡಿ, ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎನ್ನುವ ವಾಕ್ಯವನ್ನು ಹಾಕಿರುವ ಸರ್ಕಾರದ ನಡೆ ಸರಿಯಲ್ಲ. ಈ ರೀತಿಯ ತರ್ಕ ಶೂನ್ಯ ನಡೆಗಳಿಂದ ಸರ್ಕಾರವು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿರುವಂತೆ ಬಾಸವಾಗುತ್ತಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎನ್ನುವ ಕುವೆಂಪು ಅವರ ಅರ್ಥಪೂರ್ಣ ವಾಕ್ಯವನ್ನು ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಮಂಗಳವಾರ ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಮುಖಂಡರು, ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರದ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿದ ಎಬಿವಿಪಿ ಮುಖಂಡರು, ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸುವ ಮೂಲಕ ಕುವೆಂಪುರವರ ಸಾಲುಗಳ ಯಥಾವತ್ತಾಗಿ ಉಳಿಸಿಕೊಳ್ಳಬೇಕು. ಕನ್ನಡದ ಮಹಾನ್ ದಾರ್ಶನಿಕ ಕವಿಯ ಆಶಯ ಮೀರಿ ನಿಲ್ಲುವ ದಾಸ್ಯತನವನ್ನು ರಾಜ್ಯ ಸರ್ಕಾರ ತೋರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈಗ ಮತ್ತೆ ವಸತಿ ಶಾಲೆಗಳಲ್ಲಿ ಕವಿ ಕುವೆಂಪುರ ವಾಕ್ಯ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ. ಎನ್ನುವ ಘೋಷಣೆಯನ್ನ ಬದಲಾವಣೆ ಮಾಡಿ, ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎನ್ನುವ ವಾಕ್ಯವನ್ನು ಹಾಕಿರುವ ಸರ್ಕಾರದ ನಡೆ ಸರಿಯಲ್ಲ. ಈ ರೀತಿಯ ತರ್ಕ ಶೂನ್ಯ ನಡೆಗಳಿಂದ ಸರ್ಕಾರವು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿರುವಂತೆ ಬಾಸವಾಗುತ್ತಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳ ಮುಂದಿಟ್ಟು ಗೊಂದಲ ಸೃಷ್ಟಿಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿದ್ದ ಸರಸ್ವತಿ, ಗಣಪತಿ ಮೊದಲಾದ ರೀತಿಯ ಧಾರ್ಮಿಕ ಪೂಜೆಗಳ ಮಾಡುವುದನ್ನು ನಿಷೇಧಿಸಿ ಗೊಂದಲ ಸೃಷ್ಟಿ ಮಾಡಿತ್ತು. ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆ ಆದೇಶ ಹಿಂತೆಗೆದುಕೊಂಡಿತ್ತು ಎಂದು ಹೇಳಿದರು.

ಒಬ್ಬ ಸದೃಢ, ಸೃಜನಶೀಲ ವಿದ್ಯಾರ್ಥಿ ರೂಪುಗೊಳ್ಳಲು ಜ್ಞಾನಜ್ಯೋತಿಯ ಪ್ರಭೆಯು ಅತ್ಯವಶ್ಯಕ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎನ್ನುವ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಶಯದಂತೆ ಸರ್ಕಾರ ತನ್ನ ನಡೆ ತಿದ್ದಿಕೊಳ್ಳಬೇಕು. ಇಲ್ಲವಾದರೆ ರಾಜಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಬಿವಿಪಿಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ, ರಾಜ್ಯ ಕಾರ್ಯಕಾರಿಣಿ ಸದಸ್ಯ ರತನ್, ನಗರ ಸಹ ಕಾರ್ಯದರ್ಶಿ ಮೋಹಿತ್, ತಿಪ್ಪೇಸ್ವಾಮಿ, ಕರಿಬಸವ, ಉಮೇಶ್ ಇತರರಿದ್ದರು.