ತ್ರಿಪದಿಗಳ ಮುಖಾಂತರ ಸಮಾಜ ಸುಧಾರಿಸಿದ ಸಂತಕವಿ ಸರ್ವಜ್ಞ

| Published : Feb 21 2024, 02:02 AM IST

ಸಾರಾಂಶ

ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಮಡಿದ್ದ ಸಂತಕವಿ ಸರ್ವಜ್ಞ ಜಯಂತಿಯ ವೇದಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ತ್ರಿಪದಿಗಳ ಮುಖಾಂತರ ಸಮಾಜ ಸುಧಾರಿಸಿದ ಸಂತಕವಿ ಸರ್ವಜ್ಞ ಅವರಾಗಿದ್ದಾರೆ ಎಂದು ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತ್ರಿಪದಿ ಬ್ರಹ್ಮ, ಸಂತಕವಿ ಸರ್ವಜ್ಞ ಜಯಂತಿ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸರ್ಕಾರದಿಂದ ಆಚರಿಸಲ್ಪಡುತ್ತಿರುವ ಸರ್ವಜ್ಞ ಜಯಂತಿಯು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಅಂಧಕಾರ, ಕಂದಾಚಾರದಲ್ಲಿ ಮುಳುಗಿದ್ದ ಸಮಾಜದಲ್ಲಿ ತಮ್ಮ ವಚನಗಳು ಹಾಗೂ ತ್ರಿಪದಿಗಳ ಮೂಲಕ ಸಮಾಜದ ಸುಧಾರಿಸುವ ಕೆಲಸವನ್ನು ಮಾಡಿದ್ದಾರೆ ಎಂದರು.

ಸರ್ವಜ್ಞರು 1000 ಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸಿದ್ದು, ತ್ರಿಪದಿಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸುವ ಮತ್ತು ಅನುಭವಗಳನ್ನು ತೋರಿಸುವ ಕಾರ್ಯ ಮಾಡಿದ್ದಾರೆ. ಜಗತ್ತಿನ ಬೆರಳೆಣಿಕೆಯಷ್ಟು ಆಶುಕವಿಗಳಲ್ಲಿ ಸಂತಕವಿ ಸರ್ವಜ್ಞ ಮೊದಲಿಗರಾಗಿದ್ದು, ತಮ್ಮ ಕವನಗಳ ಮೂಲಕ ಜ್ಞಾನದಿಂದ ಸುಖ ಸಂತೋಷಗಳನ್ನು ಕಾಣಬಹುದಾಗಿದೆ ಎಂಬ ಸಂದೇಶವನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ತಹಸೀಲ್ದಾರ್‌ ಸುರೇಶ ವರ್ಮಾ ಮಾತನಾಡಿ, ಸರ್ವಜ್ಞ ಕವಿಗಳು ತಮ್ಮ ತ್ರಿಪದಿಗಳ ಮೂಲಕ ಸಮಾಜವನ್ನು ಬಡಿದೆಬ್ಬಿಸಿದ್ದಾರೆ. ಅವರ ವಚನಗಳು ಸಮಾಜದ ಎಲ್ಲಾ ವ್ಯಕ್ತಿಗಳಿಗೆ ಜೀವನ ಮಾರ್ಗದರ್ಶನವಾಗಿದೆ. ಸಂಕಷ್ಟಗಳನ್ನು, ಮೌಢ್ಯತ್ಯೆಯನ್ನು ಹೋಗಲಾಡಿಸುವುದರ ಜೊತೆಗೆ ಶಿಕ್ಷಣದಿಂದ ನಿರ್ಭಯ ಬದುಕನ್ನು ನಡೆಸಬಹುದಾಗಿದೆ ಎಂಬ ಸಂದೇಶವನ್ನು ತಮ್ಮ ವಚನದ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ವೈ.ಸುರೇಂದ್ರಬಾಬು ಉಪನ್ಯಾಸ ನೀಡಿ, 16ನೇ ಶತಮಾನದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಸರ್ವಜ್ಞರು ಮೂರು ಸಾಲುಗಳಲ್ಲಿ ಅರ್ಥಪೂರ್ಣ ವಚನಗಳನ್ನು ನೀಡಿದ್ದಾರೆ. ತಮ್ಮ ತ್ರಿಪದಿ ಸಾಲುಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಸಮಾರಂಭವನ್ನು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದಕ್ಕೂ ಮೊದಲು ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದವರೆಗೆ ಸಂತಕವಿ ಸರ್ವಜ್ಞರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಚೆನ್ನಣ್ಣಗೌಡ, ರಾಮು, ಶಿವರಾಜಪ್ಪ, ವೀರಭದ್ರಪ್ಪ, ಭೀಮಪ್ಪ, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು, ಸಮಾಜದ ಬಾಂಧವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅರ್ಥ ಕಳೆದುಕೊಳ್ಳುತ್ತಿರುವ ಜಯಂತಿಗಳು: ಕಾಟಾಚಾರ ಆಚರಣೆ

ಮಹಾನ್ ಚೇತನರ, ವಿವಿಧ ಸಮುದಾಯಗಳ ನಾಯಕರ ಜಯಂತಿ ಆಚರಣೆಗಳು ಅರ್ಥ ಕಳೆದುಕೊಳ್ಳುತ್ತಿದ್ದು, ಆಯೋಜಕರು ಸಹ ಕಾಟಾಚಾರಕ್ಕೆ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂದು ಜನಸಾಮಾನ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯವಾಗಿ ರಾಯಚೂರು ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಇತ್ತೀಚೆಗೆ ಆಯೋಜಿಸುತ್ತಿರುವ ಜಯಂತಿ ಕಾರ್ಯಕ್ರಮಗಳು ಕೇವಲ ಕೌಂಟಿಗೆ ಸೀಮಿತಗೊಳ್ಳುತ್ತಿವೆ.

ಜಿಲ್ಲೆಯ ಸಚಿವರ, ಶಾಸಕರು, ಸಂಸದರು, ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳು ಜಯಂತಿ ಕಾರ್ಯಕ್ರಮಗಳಿಗೆ ಬರುವುದೇ ಅಪರೂಪವಾಗಿವೆ. ಪ್ರಮುಖ ನಾಯಕರ ಜಯಂತಿಗಳಿಗಷ್ಟೇ ಶಿಷ್ಠಾಚಾರದಂತೆ ಬರುವವರು ಸಣ್ಣ-ಪುಟ್ಟ ಸಮುದಾಯಗಳಿಗೆ ಸೇರಿದ ಮಹಾನ್ ನಾಯಕ ಜಯಂತಿಗಳಿಗೆ ಹಾಜರಾಗದೇ ಅಗೌರವ ತೋರುತ್ತಿದ್ದಾರೆ.

ಸರ್ಕಾರಗಳು ಜಯಂತಿ ಆಚರಣೆಯ ಸದುದ್ದೇಶ ಮರೆತಂತೆ ಭಾವಿಸಿರುವ ಕನ್ನಡ ಮತ್ತು ಸಂಸ್ಕೃತಿ (ಜಯಂತಿ ಆಯೋಜನೆಯ ಜವಾಬ್ದಾರಿ ಹೊಂದಿರುವ) ಇಲಾಖೆ ಇಂತಹ ಕಾರ್ಯಕ್ರಮಗಳಲ್ಲಿ ಜನರನ್ನು ಸೇರಿಸುವುದು, ಮಹಾನ್‌ ನಾಯಕರ ಸ್ಮರಣೆ ಜೊತೆಗೆ ಅವರ ಜೀವನ ಸಾಧನೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡುವಲ್ಲಿ ಸಂಪೂರ್ಣ ವಿಫಲಗೊಂಡಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.