ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಭಯಾನಕ ಕಾಯಿಲೆಯಿಂದ ಬಳಲುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಾವೂರ ನಿವಾಸಿ ಜಿ.ಡಿ. ಚಾಂದನಿಯ ಚಿಕಿತ್ಸಾ ವೆಚ್ಚ ಭರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭ ಜಿಲ್ಲಾಧ್ಯಕ್ಷ ಮಹ್ಮದ ನಜೀರಸಾಬ ಮೂಲಿಮನಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಾವೂರ ನಿವಾಸಿ ಧನಂಜಯರವರ 33 ವರ್ಷದ ಪುತ್ರಿ ಜಿ.ಡಿ. ಚಾಂದನಿ (HYPER IGE MEDICATED CELL ACTIVATION SYNDROME) ಭಯಾನಕ ಕಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಒಂದು ಪುಟ್ಟ ಮಗು ಇದೆ. ಈಗ ಅವರು ಹೈದ್ರಾಬಾದನ ಐ.ಜಿ.ಇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ₹34 ಲಕ್ಷ ಚಿಕಿತ್ಸಾ ವೆಚ್ಚ ಭರಿಸಲಾಗದೇ ಸರ್ಕಾರಕ್ಕೆ ದಯಾಮರಣ ಅರ್ಜಿ ಕೋರಿ ಪತ್ರ ಬರೆದಿದ್ದಾರೆ.
ಹಲವು ಗ್ಯಾರಂಟಿಗಳನ್ನು ನೀಡಿ ಜನಪರವಾಗಿರುವ ಸರ್ಕಾರ ಇಂತಹ ರೋಗಿಯ ಚಿಕಿತ್ಸಾ ವೆಚ್ಚ ಶೀಘ್ರವೇ ಭರಿಸಿ ಸ್ಪಂದಿಸಬೇಕೆಂದು ಆಗ್ರಹಿಸಿದರು. ಶೀಘ್ರವೇ ಕ್ರಮ ಕೈಗೊಳ್ಳದೇ ಹೋದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಭಿಕ್ಷೆ ಬೇಡಿಯಾದರೂ ಅವರ ಚಿಕಿತ್ಸಾ ವೆಚ್ಚದ ಖರ್ಚಿನ ಜವಾಬ್ದಾರಿಯನ್ನು ಸಂಘವು ವಹಿಸಿಕೊಳ್ಳಲಿದೆ ಎಂದರು.ಈ ಸಂದರ್ಭದಲ್ಲಿ ಶಂಕರಗೌಡ ಬೀಳಗಿ, ಮಹಾಂತಮ್ಮ ಪಾಟೀಲ, ಆಶಾ ವೀರೇಶ ಸೇರಿದಂತೆ ಹಲವರು ಇದ್ದರು.
ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ:ಕುಷ್ಟಗಿ ತಾಲೂಕಿನ ದೋಟಿಹಾಳದ ಶಾದಿ ಮಹಲಿನಲ್ಲಿ ನೌಜವಾನ್ ಕಮಿಟಿ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಹಾಗೂ ದೋಟಿಹಾಳ ನೂತನವಾಗಿ ರಚನೆಯಾದ ಅಂಜುಮನ್ ಕಮೀಟಿಯ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಚಾಲನೆ ನೀಡಿದರು.ಪಂಚಕಮಿಟಿಯ ಯುವ ಘಟಕದ ತಾಲೂಕಾಧ್ಯಕ್ಷ ಲಾಡಸಾಬ ಕೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಸಮಾಜದ ಗುರುಗಳಾದ ಶೌಕತ್ ಅಲಿ ಆದವಾನಿ, ಅಂಜುಮನ್ ಕಮಿಟಿಯ ನೂತನ ಅಧ್ಯಕ್ಷ ಅಬ್ದುಲ್ ರಶೀದಸಾಬ ಯಲಬುರ್ಗಿ, ಮುಖಂಡರಾದ ಗುಡುಸಾಬ ಗಚ್ಚಿನಮನಿ, ಇಬ್ರಾಹಿಮ್ ಸಾಬ ನಡಲಮನಿ, ಮೈಬೂಬಸಾಬ ಉಲ್ಯಾಳ, ಗೌಸುಸಾಬ ಕೊಣ್ಣೂರ, ರುಕಮುದ್ದಿನ್ ಸಾಬ ನೀಲಗಾರ, ಲಾಡಸಾಬ ಯಲಬುರ್ಗಿ, ಶರಿಫಾಬಿ ಯರಡೋಣಿ, ಅಂಜುಮನ್ ಕಮಿಟಿಯ ಕಾರ್ಯದರ್ಶಿ ಮೈಬೂಬಸಾಬ ನಡಲಮನಿ, ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಮಕ್ತುಂ ಅಲಿ ಬಡೇಘರ್, ಹುಸೇನ್ ಬಿಜಕತ್ತಿ, ನಬಿಸಾಬ ಇಲಕಲ್ಲ, ಮಂಜೂರ್ ಅಲಿ ಬನ್ನು ಸೇರಿದಂತೆ ಇತರರು ಇದ್ದರು.