ರಾಣಿಬೆನ್ನೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪರವಾನಗಿ ಭೂ ಮಾಪಕರು ನಗರದಲ್ಲಿ ಪ್ರತಿಭಟಿಸಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬಿ.ಎನ್. ನಾಗಭೂಷಣ ಅವರಿಗೆ ಮನವಿ ಸಲ್ಲಿಸಿದರು.ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಪರವಾನಗಿ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಸೇವೆಗೆ ತಕ್ಕಂತೆ ಸಮಾನ ವೇತನ ನೀಡುತ್ತಿಲ್ಲ. ಇದರಿಂದ ನಮಗೆ ಜೀವನದ ನಿರ್ವಹಣೆ ತುಂಬಾ ಕಷ್ಟವಾಗುತ್ತದೆ. ಅಳತೆ ಮಾಡುವ ಸಂದರ್ಭದಲ್ಲಿ ಗದ್ದಲ ಗಲಾಟೆಯಾದರೆ ನಮಗೆ ಸೂಕ್ತ ಭದ್ರತೆಯೂ ಇರುವುದಿಲ್ಲ. ಆದ್ದರಿಂದ ನಮನ್ನು ಕಾಯಂಗೊಳಿಸಿ, ಸೂಕ್ತ ವೇತನ ನೀಡುವುದರ ಜೊತೆಗೆ ನಮಗೆ ಭದ್ರತೆ ಒದಗಿಸಬೇಕು. ಸೇವಾ ಭದ್ರತೆ ಹಾಗೂ ಜೀವನ ಭದ್ರತೆ ನೀಡುವವರೆಗೂ ಮತ್ತು ಕಾಯಂ ನೇಮಕ ಮಾಡಿಕೊಂಡು ಸೂಕ್ತ ವೇತನ ನೀಡುವವರೆಗೂ ನಾವು ಸೇವೆಯನ್ನು ಸ್ಥಗಿತಗೊಳಿಸಿ ರಾಜ್ಯ ಸಂಘವು ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ನಾವು ಪಾಲ್ಗೊಳ್ಳುತ್ತೇವೆ. ಆದ್ದರಿಂದ ನಮ್ಮ ಲಾಗಿನ್‌ಗಳಲ್ಲಿರುವ ಎಲ್ಲ ತರಹದ ಕಡತಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.ಗಂಗಾಧರ ನಾಯ್ಕ್, ಸಿದ್ದಯ್ಯ ನಾಯಕ, ಮಹೇಶ ಎಮ್. ಬೆನ್ನೂರ, ಗೋವಿಂದಪ್ಪ ಟಿ. ಶರೀಫ್ ಸಾಬ್ ಕಡೆಮನಿ, ಆನಂದ ಏನ್, ಯತೀಶಯ್ಯ ಜಿ. ಬಿ., ಬಸವರಾಜ ಯು. ಎಸ್., ಸಿದ್ದಲಿಂಗೇಶ ಅರಳಿಹಳ್ಳಿ, ಧರಿಯಪ್ಪ ಗೋಳಸಂಗಿ, ಕಿರಣರೆಡ್ಡಿ, ಅರುಣಗೌಡ ಹಾದಿಮನಿ, ಭೀಮಾಶಂಕರ ಮತ್ತಿತರರಿದ್ದರು.