ಸಾರಾಂಶ
ಆಶಾ ಕಾರ್ಯಕರ್ತೆಯರ ಮೇಲ್ವಿಚಾರಣೆಗೆ ಕೆಲಸ ನಿರ್ವಹಿಸುತ್ತಿರುವ ಆಶಾ ಸುಗಮಕಾರರನ್ನು ಸರ್ಕಾರ ಕೆಲಸದಿಂದ ತೆಗೆಯುವ ನಿರ್ಧಾರ ಕೈಗೊಂಡಿದ್ದು, ಕೂಡಲೇ ಸರ್ಕಾರದ ಮೇಲೆ ಒತ್ತಡ ಹೇರಿ ಆಶಾ ಸುಗಮಕಾರರನ್ನು ಮುಂದುವರಿಸಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಶನಿವಾರ ಆಶಾ ಸುಗಮಕಾರರು ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಆಶಾ ಕಾರ್ಯಕರ್ತೆಯರ ಮೇಲ್ವಿಚಾರಣೆಗೆ ಕೆಲಸ ನಿರ್ವಹಿಸುತ್ತಿರುವ ಆಶಾ ಸುಗಮಕಾರರನ್ನು ಸರ್ಕಾರ ಕೆಲಸದಿಂದ ತೆಗೆಯುವ ನಿರ್ಧಾರ ಕೈಗೊಂಡಿದ್ದು, ಕೂಡಲೇ ಸರ್ಕಾರದ ಮೇಲೆ ಒತ್ತಡ ಹೇರಿ ಆಶಾ ಸುಗಮಕಾರರನ್ನು ಮುಂದುವರಿಸಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಶನಿವಾರ ಆಶಾ ಸುಗಮಕಾರರು ಮನವಿ ಸಲ್ಲಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಭೆಗಳಲ್ಲಿ ಭಾಗವಹಿಸಲು ಆಗಮಿಸಿದ್ದ, ಶಾಸಕ ರವಿಕುಮಾರ್ ಅವರಿಗೆ ಆಶಾ ಸುಗಮಕಾರರು ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡು ಸರ್ಕಾರ ತಮ್ಮ ಸೇವೆಯನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಆಶಾ ಸುಗಮಕಾರರನ್ನಾಗಿ ಮಾಡಿದ್ದ ಮೇರೆಗೆ ಕಳೆದ 12 ವರ್ಷಗಳಿಂದಲೂ ಆಶಾ ಸುಗಮಕಾರರಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೇವೆ. ಆಶಾ ಕಾರ್ಯಕರ್ತೆಯರ ಕ್ಷೇತ್ರಕ್ಕೆ ತೆರಳಿ ಮೇಲ್ವಿಚಾರಣೆ ಮಾಡುತ್ತಾ, ಸುಗಮವಾಗಿ ಕೆಲಸ ಮಾಡಲು ನಾವು ಮಹತ್ತರ ಪಾತ್ರ ವಹಿಸುತ್ತೇವೆ. ಆದರೆ ಫೆ.25 ರಂದು ಅಭಿಯಾನ ನಿರ್ದೇಶಕರು ಅಧಿಕೃತ ಜ್ಞಾಪನ ಹೊರಡಿಸಿ ಆಶಾ ಸುಗಮಕಾರರನ್ನು ಕೆಲಸದಿಂದ ಕೊನೆಗೊಳಿಸಿರುವುದಾಗಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಪ್ರತಿ 20 ಆಶಾ ಕಾರ್ಯಕರ್ತೆಯರಿಗೆ ಒಬ್ಬರಂತೆ ಸುಗಮಕಾರರಾಗಿ ಶಿಡ್ಲಘಟ್ಟ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಶಾ ಕಾರ್ಯಕರ್ತೆಯರು ಸುಗಮವಾಗಿ ಕೆಲಸ ಮಾಡಲು ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜೊತೆಗೂಡಿರುತ್ತೇವೆ. ಸುಗಮಕಾರರ ಅಡಿಯಲ್ಲಿ ಬರುವ ಎಲ್ಲಾ ವರದಿಗಳನ್ನು ಇಲಾಖೆಗೆ ಕಾಲಕಾಲಕ್ಕೆ ನೀಡಿ ಆಶಾ ಕಾರ್ಯಕ್ರಮದ ಯಶಸ್ಸಿನ ಜೊತೆಗೆ ಇದ್ದೇವೆ. ಆದರೆ ಈ ರೀತಿ ದಿಢೀರನೆ ನಮ್ಮನ್ನು ಕೆಲಸದಿಂದ ತೆಗೆದಿರುವುದು ನಿಜಕ್ಕೂ ಸುಗಮಕಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದುದರಿಂದ ಆಶಾ ಸುಗಮಕಾರರನ್ನಾಗಿ ನಮ್ಮನ್ನು ಮುಂದುವರಿಸಬೇಕೆಂದು ಶಾಸಕರಿಗೆ ಮನವಿ ಮಾಡಿ ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಿದರು.