ಸಾರಾಂಶ
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸೇವಾದೀಕ್ಷಾ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮನವಿ ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ತರೀಕೆರೆ ತಾಲೂಕು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಕನ್ನಡ ಸಾಹಿತ್ಯಪರಿಷತ್ತು ಸೇವಾ ದೀಕ್ಷೆ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವಂತೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮನವಿ ಮಾಡಲಾಗಿದೆ. ಸೇವಾದೀಕ್ಷೆ ಸಮಾರಂಭ ಬಹಳ ಉತ್ತಮ ಕಾರ್ಯಕ್ರಮ. ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರವಿ ದಳವಾಯಿ ಅರ್ಥಪೂರ್ಣವಾದ ಕವನಗಳನ್ನು ರಚಿಸುತ್ತಾರೆ. ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಸಿದ್ದಾರೆ. ನಿಕಟಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ ಸಹ ಕಸಾಪ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಹೋಬಳಿ ಮಟ್ಟದಲ್ಲೂ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳು ಏರ್ಪಾಡಾಗಬೇಕು. ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೆ ತಾವು ಸಹಕರಿಸುವುದಾಗಿ ತಿಳಿಸಿದರು.ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ ಮಾತನಾಡಿ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಅವರ ಸಹಕಾರದಿಂದ ತಾವು ಅಧ್ಯಕ್ಷರಾಗಿ ಆಯ್ಕೆಯಾಗಿ ಪರಿಷತ್ತಿನ ಎಲ್ಲರ ಸಹಕಾರದಿಂದ ಸಾಹಿತ್ಯ ಸಮ್ಮೇಳನ, ದತ್ತಿ ಉಪನ್ಯಾಸ ಇತ್ಯಾದಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಯಿತು. ಎಲ್ಲರ ಸಹಕಾರದಿಂದ ಸಾಹಿತ್ಯ ಪರಿಷತ್ತಿಗೆ ನಿವೇಶವವನ್ನು ಒದಗಿಸಲಾಗಿದ್ದು, ಪರಿಷತ್ತಿಗೆ ದಾನಿಗಳಿಂದ ದತ್ತಿ ನಿಧಿ ಕೂಡ ಸಂಗ್ರಹಿಸಲಾಗಿದೆ ಎಂದರು.ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಣೇಶ್ ಮಾತನಾಡಿ ಕನ್ನಡ ಸಾಹಿತ್ಯ ಶ್ರೀಮಂತ ವಾಗಿದೆ. ಕನ್ನಡವನ್ನು ಬೆಳೆಸುವಲ್ಲಿ ಹೆಚ್ಚು ತಾಂತ್ರಿಕತೆ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಚನೆಯಾಗುವ ಲೇಔಟ್ ಗಳಲ್ಲಿ ಸಮುದಾಯದ ಉದ್ದೇಶಕ್ಕೆ ನಿಗಧಿ ಪಡಿಸುವ ನಿವೇಶನಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಒದಗಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ರವಿದಳವಾಯಿ ಪರಿಷತ್ತಿನ ದ್ವಜ ಸ್ವೀಕರಿಸಿ ಮಾತನಾಡಿ ಪರಿಷತ್ತಿನ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿರುವುದು. ತಮಗೆ ತುಂಬಾ ಸಂತೋಷ ತಂದಿದೆ. ಎಲ್ಲರೂ ಸೇರಿ ಕನ್ನಡ ಕಟ್ಟುವ ಕೆಲಸ ಮಾಡೋಣ, ಸತ್ಯ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕನ್ನಡ ಸೇವೆಯನ್ನು ನಿರ್ವಹಿಸುತ್ತೇನೆ. ಸಾಹಿತ್ಯ ಪರಿಷತ್‌ನಿಂದ ಕನ್ನಡವನ್ನು ಮನೆ ಮನೆಗೆ ತಲುಪಿ ಸುವ ಕಾರ್ಯ, ಶ್ರಾವಣ ಸಂಜೆ, ನುಡಿ ನಿತ್ಯೋತ್ಸವ ಇತ್ಯಾದಿ ಕಾರ್ಯಕ್ರಮ ಎಲ್ಲರ ಸಹಕಾರದಿಂದ ನಿರ್ವಹಿಸಲಾಗುವುದು ಎಂದು ಹೇಳಿದರು.ಚಿಕ್ಕಮಗಳೂರು ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿ ನಲ್ಲಿ ಸೇವಾದೀಕ್ಷೆ ಪರಿಕಲ್ಪನೆ ತಂದುಕೊಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯಾಗಿದೆ. ಭಾಷೆಗಾಗಿಯೇ ಇರುವಂತಹ ಪರಿಷತ್ತು ಎಂದರೆ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಾಗಿದೆ. ಭಾಷೆ ಉಳಿದರೆ ಸಂಸ್ಕೃತಿ ಉಳಿಯಲು ಸಾಧ್ಯ. ನಾವು ಮಾತನಾಡುವ ಹಾಗೆಯೇ ನಾವು ಬರೆಯುತ್ತೇವೆ. ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆಯಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕನ್ನಡ ಕುಟಿರಗಳು ನಿರ್ಮಾಣವಾಗ ಬೇಕು. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕು ಎಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್, ಮಹಿಳಾ ಕಸಾಪ ಅಧ್ಯಕ್ಷ ಸುನಿತ ಕಿರಣ್ ಕುಮಾರ್ ಮಾತನಾಡಿದರು.ಕಸಾಪ ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಕಸಾಪ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಚೇತನ್ ಗೌಡ, ತಿಪ್ಪೇಶ್, ಉಮಾ ಪ್ರಕಾಶ್, ಸಾಹಿತ್ಯ ಪರಿಷತ್ತು ಸದಸ್ಯರು, ಪರಿಷತ್ತು ಪದಾಧಿ ಕಾರಿಗಳು, ಹೋಬಳಿ ಅಧ್ಯಕ್ಷರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-- ಬಾಕ್ಸ್--
ಮನಸುಗಳ ಒಗ್ಗೂಡಿಸುವ ಶಕ್ತಿ ಕನ್ನಡಕ್ಕಿದೆವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು, ಜನಪರ ಕಳಕಳಿ ಹೊಂದಿದವರು, ಯಾವುದೇ ಜಾತಿ, ಧರ್ಮ ಬೇಧ ಭಾವ ಇಲ್ಲದೆ ಕನ್ನಡ ಮನಸುಗಳನ್ನು ಒಗ್ಗೂಡಿಸುವ ಶಕ್ತಿ ಇರುವುದು ಕನ್ನಡ ಮತ್ತು ಕನ್ನಡ ಸಾಹಿತ್ಯಕ್ಕೆ ಮಾತ್ರ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್ ಹೇಳಿದರು.
ಕನ್ನಡದಲ್ಲಿ ಎಲ್ಲ ಇದೆ, ಕನ್ನಡ ನಾಡು ನುಡಿಯನ್ನು ಕಟ್ಟುವಂತಹ ಕಾರ್ಯದಲ್ಲಿ ಅನೇಕ ಹಿರಿಯರು ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಕರ್ಪೂರ ಶ್ರೀನಿವಾಸರಾಯರು, ಬೆಳ್ಳಾವೆ ವೆಂಕಟರಾಯರು, ಗಳಗನಾಥ ಇಂತಹ ಅನೇಕ ಹಿರಿಯರ ಕನ್ನಡ ಸೇವೆಯನ್ನು ಸ್ಮರಿಸಿದರು.--
15ಕೆಟಿಆರ್.ಕೆ.1ಃತರೀಕೆರೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕಸಾಪ ನೂತನ ಅಧ್ಯಕ್ಷ ರವಿ ದಳವಾಯಿ, ನಿಕಟಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ, ಕಸಾಪ ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಮಹಿಳಾ ಕಸಾಪ ಅಧ್ಯಕ್ಷೆ ಸುನಿತ ಕಿರಣ್ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಗಣೇಶ್, ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್ ಮತ್ತಿತರರು ಇದ್ದಾರೆ.