ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ ಸುಪ್ರೀಂ ಕೋರ್ಟ್ ಆದೇಶದಂತೆ ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಲ್ಲಾ ತಾಲೂಕುಗಳ ತಹಸೀಲ್ದಾರ್, ಜಿಲ್ಲಾ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಹಾಗೂ 50ಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ ಮನವಿ ನೀಡಲಾಯಿತು.ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆ.15 ಮತ್ತು ಜ.26ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತೇವೆ. ಆದರೆ ಅದೇ ದಿನ ಬಳಸಿ ಎಸೆದ ಸಣ್ಣ ಸಣ್ಣ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳು ಕಸ ಮತ್ತು ಚರಂಡಿಗಳಲ್ಲಿ ಕಾಣಸಿಗುತ್ತವೆ. ಪ್ಲಾಸ್ಟಿಕ್ ಧ್ವಜಗಳು ಬೇಗನೆ ನಾಶವಾಗುವುದಿಲ್ಲ, ಆದ್ದರಿಂದ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳ ಅವಮಾನವನ್ನು ನೋಡಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ತಾಲೂಕುಗಳ ತಹಸೀಲ್ದಾರರಿಗೆ ಮನವಿ ನೀಡಲಾಯಿತು. ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜದ ಅಪಮಾನ ಅಥವಾ ಅನಾದರವಾಗುವ ಕೃತ್ಯಗಳು ಆಗದಂತೆ ಶಿಕ್ಷಣ ಅಧಿಕಾರಿಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಮನವಿ ನೀಡಲಾಯಿತು.
ಪ್ಲಾಸ್ಟಿಕ್ ಬಳಸಿ ರಾಷ್ಟ್ರಧ್ವಜದ ಅಪಮಾನ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳು ಮತ್ತು ಶಿಕ್ಷಣ ಇಲಾಖೆಗಳು ಸುತ್ತೋಲೆ ಹೊರಡಿಸಿದ್ದವು. ಅದರ ಪ್ರಕಾರ ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ಸಂವಿಧಾನ ಬಾಹಿರವಾಗಿದೆ ಎಂದು ಮನವಿಯಲ್ಲಿ ಮನವರಿಕೆ ಮಾಡಲಾಗಿದೆ.ಭಾವಿ ಪೀಳಿಗೆ ರಾಷ್ಟ್ರಾಭಿಮಾನಿಗಳಾಗಲಿ ಎಂಬ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ಕಳೆದ 22 ವರ್ಷಗಳಿಂದ ‘ರಾಷ್ಟ್ರಧ್ವಜವನ್ನು ಗೌರವಿಸಿ’ ಎಂಬ ಈ ಉಪಕ್ರಮವನ್ನು ನಡೆಸುತ್ತಿದೆ.