ಸಾರಾಂಶ
ಸಾರ್ವಜನಿಕ ಗಣಪತಿ ಇಡುವಂತಹ ಸಂಘಟನೆಗಳು ಆದಷ್ಟು ಪೊಲೀಸ್ ಇಲಾಖೆಯು ನೀಡಿದ ಸಮಯದಲ್ಲೆ ವಿಸರ್ಜನೆ ಮಾಡುವುದರಿಂದ ಎಲ್ಲರಿಗೂ ಉತ್ತಮ ಎಂದು ಶಿರಸಿ ಡಿಎಸ್‌ಪಿ ಕೆ.ಎಲ್. ಗಣೇಶ ತಿಳಿಸಿದರು.
ಶಿರಸಿ: ಮುಂಬರುವ ಸಾರ್ವಜನಿಕ ಗಣೇಶ ಚತುರ್ಥಿ ಹಬ್ಬದಲ್ಲಿ ಡಿಜೆ ಬಳಸಲು ಅವಕಾಶವಿಲ್ಲ. ಈ ಕುರಿತು ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಈ ಆದೇಶವನ್ನು ಯಾರೂ ಧಿಕ್ಕರಿಸಲು ಸಾಧ್ಯವಿಲ್ಲ ಎಂದು ಶಿರಸಿ ಡಿಎಸ್‌ಪಿ ಕೆ.ಎಲ್. ಗಣೇಶ ತಿಳಿಸಿದರು.ಗುರುವಾರ ನಗರಠಾಣೆ ಗಣೇಶ ಸಭಾಭವನದಲ್ಲಿ ನಡೆದ ಶಾಂತಿಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಗಣಪತಿ ಇಡುವಂತಹ ಸಂಘಟನೆಗಳು ಆದಷ್ಟು ಪೊಲೀಸ್ ಇಲಾಖೆಯು ನೀಡಿದ ಸಮಯದಲ್ಲೆ ವಿಸರ್ಜನೆ ಮಾಡುವುದರಿಂದ ಎಲ್ಲರಿಗೂ ಉತ್ತಮ. ಅಲ್ಲದೇ ಪ್ರತಿ ಗಣೇಶ ಮಂಟಪದ ಹತ್ತಿರ ಇಲಾಖೆಯ ಸಿಬ್ಬಂದಿ ಇರುತ್ತಾರೆ. ಎಲ್ಲೆಡೆ ಗಣೇಶ ಹಬ್ಬ ಇರುವುದರಿಂದ ನಮಗೂ ಸಿಬ್ಬಂದಿ ಕೊರತೆ ಆಗುತ್ತದೆ.
ಆ ಹಿನ್ನೆಲೆ ರಾತ್ರಿ ವೇಳೆ ಸಂಘಟಕರು ಇಬ್ಬರನ್ನು ನೇಮಿಸಿಕೊಳ್ಳಬೇಕು. ಅಲ್ಲದೇ ಮೂರ್ತಿಯ ಮೇಲೆ ಅಪಾರ ಬೆಲೆಬಾಳುವ ಆಭರಣ ಹಾಕುವುದಿದ್ದಲ್ಲಿ ಪೊಲೀಸ್ ಇಲಾಖೆಗೆ ಮೊದಲೆ ತಿಳಿಸಬೇಕು. ಅಗ್ನಿ ಅವಘಡಗಳನ್ನು ತಪ್ಪಿಸಲು ಪೂರ್ವನಿಯೋಜಿತ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು ಎಂದರು. ಗಣಪತಿ ವಿಸರ್ಜನೆ ವೇಳೆ ಪೊಲೀಸರೊಂದಿಗೆ ನಿಮ್ಮದೇ ಆದ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ನಗರಠಾಣೆ ಪಿಎಸ್ಐ ನಾಗಪ್ಪ ಬಿ. ಮಾತನಾಡಿ, ನಾವೆಲ್ಲ ಸಂಪ್ರದಾಯ, ಸಂಸ್ಕೃತಿಯಂತೆ ಗಣೇಶ ಹಬ್ಬವನ್ನು ಆಚರಿಸೋಣ. ಪೊಲೀಸ್ ಇಲಾಖೆ ನಿಮ್ಮ ಜತೆ ಇರುತ್ತದೆ. ಸಾರ್ವಜನಿಕರು ಇಲಾಖೆಯ ಜತೆ ಕೈಜೋಡಿಸಿ ಎಂದು ವಿನಂತಿಸಿದರು. ವೇದಿಕೆಯಲ್ಲಿ ಸಿಪಿಐ ಶಶಿಕಾಂತ ವರ್ಮಾ, ಮಾರುಕಟ್ಟೆ ಠಾಣೆ ಪಿಎಸ್‌ಐ ರತ್ನಾ ಕುರಿ ಉಪಸ್ಥಿತರಿದ್ದರು.