ಸಾರಾಂಶ
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ತುರ್ತು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಮುಖಂಡರು ಮತ್ತು ಸಚಿವ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪೂರ್, ಎಚ್.ಆಂಜನೇಯ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ತುರ್ತು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ ಮುಖಂಡರು ಮತ್ತು ಸಚಿವ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪೂರ್, ಎಚ್.ಆಂಜನೇಯ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.ಮಾಜಿ ಸಚಿವ ಎಚ್. ಆಂಜನೇಯ ಮನವಿ ಪತ್ರ ಓದಿ, ನಿರಂತರ ಹೋರಾಟದ ಫಲ ಒಳಮೀಸಲಾತಿ ವರ್ಗೀಕರಣಕ್ಕಾಗಿ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಜತೆಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆಯೆಂದು ಐತಿಹಾಸಿಕ ತೀರ್ಪನ್ನು ನೀಡಿದೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರ ಒಳ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿವೆ. ಅದೇ ರೀತಿ ತಾವು ಕೂಡ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಶೀಘ್ರ ಜಾರಿಗೊಳಿಸುವ ಮೂಲಕ ಸಮುದಾಯದ ಸಮಗ್ರ ಪ್ರಗತಿಗೆ ಮುಂದಾಗಬೇಕೆಂದು ಕೋರಿದರು.
ಮುಖ್ಯವಾಗಿ ಈಗಾಗಲೇ ಕೆ.ಪಿ.ಎಸ್.ಸಿ ಸೇರಿ ವಿವಿಧ ಇಲಾಖೆಗಳ ಮೂಲಕ ಘೋಷಿತವಾಗಿರುವ ಪರೀಕ್ಷೆಗಳನ್ನು ಒಳಮೀಸಲು ಜಾರಿಗೊಳ್ಳುವವರೆಗೂ ತಡೆ ಹಿಡಿಯಬೇಕು. ಒಳಮೀಸಲಾತಿ ಜಾರಿಗೊಳ್ಳುವವರೆಗೆ ರಾಜ್ಯ ಸರ್ಕಾರದ ಯಾವುದೇ ಇಲಾಖೆಗಳ ಹುದ್ದೆಗಳನ್ನು ತುಂಬಬಾರದು. ಸರ್ಕಾರದ ಯೋಜನೆಗಳಲ್ಲಿ ಆರ್ಥಿಕ ಮೀಸಲಾತಿ (SCSP/TSP), ಕೆ.ಐ.ಎ.ಡಿ.ಬಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯೂ ಸ್ಥಗಿತಗೊಳಿಸಬೇಕು ಎಂದರು.ಎಲ್ಲ ಮುಖಂಡರ ಮಾತು ಆಲಿಸಿ, ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನೊಂದ, ಅಸ್ಪೃಶ್ಯ ಸಮಾಜದ ನೋವಿನ ಅರಿವು ನನಗಿದೆ. ಒಳಮೀಸಲು ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದಂತೆ ಅದನ್ನು ಸ್ವಾಗತಿಸಿದ್ದೇನೆ. ನಾನು ನೊಂದ ಜನರ ಪರ ಇದ್ದೇನೆ ಎಂದು ಒಳಮೀಸಲು ಜಾರಿಗೊಳಿಸುವ ಅಭಯ ನೀಡಿದರು.
ಈ ವೇಳೆ ಶಾಸಕರಾದ ಮಾಯಕೊಂಡದ ಕೆ.ಎಸ್. ಬಸವಂತಪ್ಪ, ನೆಲಮಂಗಲದ ಶ್ರೀನಿವಾಸ್, ಮಾಜಿ ಸಚಿವ ಎಂ.ಶಿವಣ್ಣ , ವಿಧಾನ ಪರಿಷತ್ತು ಸದಸ್ಯರಾದ ಡಾ.ಡಿ. ತಿಮ್ಮಯ್ಯ ಹಾಗೂ ನಿಯೋಗದ ಸದಸ್ಯರಿದ್ದರು.