ಸಾರಾಂಶ
ಮೂಡಭಟ್ಕಳ ಮತ್ತು ಕಾಯ್ಕಿಣಿಯಲ್ಲಿ ಅಂಡರ್ ಪಾಸ್ ಮಾಡದೇ ಹೆದ್ದಾರಿ ಕಾಮಗಾರಿ ಮಾಡಲು ಬಿಡುವುದಿಲ್ಲ.
ಭಟ್ಕಳ: ಮೂಡಭಟ್ಕಳ ಮತ್ತು ಕಾಯ್ಕಿಣಿಯಲ್ಲಿ ಅಂಡರ್ ಪಾಸ್ ಮಾಡದೇ ಹೆದ್ದಾರಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಹಾಯ ಆಯುಕ್ತೆ ಡಾ. ನಯನಾ ಅವರ ಅಧ್ಯಕ್ಷತೆಯಲ್ಲಿ ಹೆದ್ದಾರಿ ಹೋರಾಟ ಸಮಿತಿಯವರ ಸಭೆ ಕರೆದು ಕಾಮಗಾರಿಗೆ ಸಾರ್ವಜನಿಕರ ಮನವೊಲಿಸುವಂತೆ ಮನವಿ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಸಹಾಯಕ ಆಯುಕ್ತೆ ಡಾ. ನಯನಾ, ತಾಲೂಕಿನಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಗಿಸಬೇಕಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಮೂಡಭಟ್ಕಳ, ಕಾಯ್ಕಿಣಿಯಲ್ಲಿ ಅಂಡರಪಾಸ್ ಗೆ ಪ್ರಸ್ತಾವನೆ ಹೋಗಿದೆ. ಈ ಕಾಮಗಾರಿ ಆಗಿಯೇ ಆಗುತ್ತದೆ. ಅದರೆ, ಯಾವ ಸಮಯಕ್ಕೆ ಅನುಮೋದನೆ ನೀಡುತ್ತಾರೆ ಎನ್ನುವುದು ನಮಗೂ ತಿಳಿದಿಲ್ಲ. ಹೆದ್ದಾರಿಯಲ್ಲಿ ಆಗುತ್ತಿರುವ ಅಪಘಾತವನ್ನು ತಪ್ಪಿಸಲು ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ. ಜವಾಬ್ದಾರಿ ಹೊಂದಿರುವ ಸಂಘ-ಸಂಸ್ಥೆಗಳು ಸ್ಥಳೀಯ ಸಾರ್ವಜನಿಕರ ಮನವೊಲಿಸಿ ಕಾಮಗಾರಿ ಮುಂದುವರಿಸಲು ಸಹಕಾರ ನೀಡಬೇಕು ಎಂದರು.ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ, ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ ನಾಯಕ, ತಂಝೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ತಾಲೂಕಿನಲ್ಲಿ ಹೆದ್ದಾರಿ ಅರ್ಧಂಬರ್ಧ ಕಾಮಗಾರಿಯಿಂದ ಅಪಘಾತಗಳು ಹೆಚ್ಚುತ್ತಿವೆ. ಅಪಘಾತ ತಪ್ಪಿಸಲು ಆಗಬೇಕಾಗಿರುವ ಅತೀ ಅಗತ್ಯ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿ, ಸಂಸದರಿಗೆ, ಸಚಿವರಿಗೆ ಮನವಿ ಮಾಡುತ್ತ ಬಂದಿದ್ದೇವೆ. ಭಟ್ಕಳದಲ್ಲಿ ತುರ್ತು ಆಗಬೇಕಾದ ಸರ್ವಿಸ್ ರಸ್ತೆ, ಚರಂಡಿ, ಅಂಡರ್ ಪಾಸ್ ಬಗ್ಗೆ ನೀಲನಕ್ಷೆ ರೂಪಿಸಿ ಅನುಮೋದನೆ ಕಳುಹಿಸಿ 5 ವರ್ಷಗಳಾದರೂ ಇನ್ನೂ ತನಕ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿಲ್ಲ. ಹೆದ್ದಾರಿ ಕಾಮಗಾರಿ ಬಗ್ಗೆ ಜನರಲ್ಲಿ ಆಕ್ರೋಶ ಮತ್ತು ತೀವ್ರ ಅಸಮಾಧಾನವಿದೆ. ಈಗ ನಾವು ಜನರ ಬಳಿ ಹೋಗಿ ಕಾಮಗಾರಿ ಮಾಡಲು ಅನುಮತಿ ಕೇಳಿದರೆ ಜನರು ಸುಮ್ಮನಿರುತ್ತಾರೆಯೇ? ಈ ಹಿಂದೆ ಕಳುಹಿಸಿದ ನೀಲನಕ್ಷೆಗೆ ಅನುಮೋದನೆ ನೀಡದ ಹೆದ್ದಾರಿ ಪ್ರಾಧಿಕಾರ ಮುಂದೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ನಂತರ ಮಾಡುತ್ತಾರೆ ಎನ್ನುವ ಗ್ಯಾರಂಟಿ ಏನಿದೆ ಎಂದು ಪ್ರಶ್ನಿಸಿದರು.ಅಗತ್ಯ ಕಾಮಗಾರಿ ಅನುಮೋದನೆ ನೀಡುವ ತನಕ ಕಾಮಗಾರಿ ನಡೆಸಲು ಸಹಕಾರ ನೀಡುವಂತೆ ನಾವು ಹೇಳಿದರೂ ಸ್ಥಳೀಯರು ಕೇಳುವ ಪರಿಸ್ಥಿತಿಯಲ್ಲಿಲ್ಲ ಎಂದರು.
ಸಂಶುದ್ದೀನ ವೃತ್ತದಿಂದ ಗಟಾರ ಕಾಮಗಾರಿ ಮಾಡಿಕೊಂಡು ಹೆದ್ದಾರಿ ಕಾಮಗಾರಿ ಮಾಡಬೇಕು. ಮೂಡಭಟ್ಕಳ ಮತ್ತು ಕಾಯ್ಕಿಣಿ ಹೊರತುಪಡಿಸಿ ಉಳಿದ ಭಾಗದಲ್ಲಿ ಬಾಕಿ ಇರುವ ಕಾಮಗಾರಿ ಮುಗಿಸಿದರೆ ಜನರಿಗೂ ವಿಶ್ವಾಸ ಬರಲು ಸಾಧ್ಯ. ಹೀಗಾಗಿ ಸಂಶುದ್ದೀನ ವೃತ್ತದಲ್ಲಿ ಕಾಮಗಾರಿ ಕೂಡಲೇ ಆರಂಭಿಸಬೇಕು ಎಂದರು. ಮೂಡಭಟ್ಕಳದಲ್ಲಿ ಅಂಡರ್‌ಪಾಸ್ ಮಾಡದೇ ಹೆದ್ದಾರಿ ಕಾಮಗಾರಿ ಮುಂದುವರಿಸಲು ಉಪಸ್ಥಿತರಿದ್ದ ಮುಟ್ಟಳ್ಳಿ ಗ್ರಾಪಂ ಅದ್ಯಕ್ಷರೂ ವಿರೋಧ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತೆ ಡಾ. ನಯನಾ ಅವರು ಸಂಶುದ್ದೀನ ವೃತ್ತದಲ್ಲಿ ಒಳಚರಂಡಿ, ಗಟಾರ ಕಾಮಗಾರಿ ಮಾಡಿ ಹೆದ್ದಾರಿ ಕಾಮಗಾರಿ ಆರಂಭಿಸುವಂತೆ ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಿದರು. ಅರ್ಧಕ್ಕೆ ನಿಂತ ಒಳಚರಂಡಿ ಕಾಮಗಾರಿಯನ್ನೂ ಆರಂಭಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.ಸಭೆಯಲ್ಲಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ ನಾಯಕ, ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಅಭಿಯಂತರರು, ನಾಗರಿಕ ಹಿತರಕ್ಷಣಾ ಸಮಿತಿಯ ಜಯರಾಮ್ ಶ್ಯಾನಭಾಗ, ಎಸ್.ಎಂ. ನಾಯ್ಕ ಮುಂತಾದವರಿದ್ದರು.