ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಇದ್ದರೂ ಸಂಬಂಧಪಟ್ಟ ಇಲಾಖೆಯ ಕಣ್ಣು ತಪ್ಪಿಸಿ ಜಿಪಿಎಸ್ ಬಂದ್ ಮಾಡಿ ಮರಳು ಗುತ್ತಿಗೆದಾರರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಸಕ್ರಮದ ಹೆಸರಿನಲ್ಲಿ ಅಕ್ರಮ ಮಾರಾಟ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.
ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ತಕ್ಷಣವೇ ಬಂದ್ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ ಹಾಗೂ ತಾಲೂಕು ಅಧ್ಯಕ್ಷ ನಾಗೇಶ ಅಮರಾಪುರ ಅಗ್ರಹಿಸಿದರು.
ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ತಾಲೂಕು ವ್ಯಾಪ್ತಿಯ ಅಕ್ಕಿಗುಂದ, ಬಟ್ಟೂರ, ಅಮರಾಪುರ, ಹುಲ್ಲೂರು, ಹಿರೇಮಲ್ಲಾಪುರ, ನೆಲೋಗಲ್, ಆದರಹಳ್ಳಿ, ಪು.ಬಡ್ನಿ ಹಾಗೂ ಮಾಡಳ್ಳಿ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಕೆಲವು ಟಿಪ್ಪರ್ ಹಾಗೂ ಲಾರಿಗಳು ಬೇರೆ ತಾಲೂಕು, ದೂರದ ಊರುಗಳಿಗೆ ನೀಡಲಾಗಿರುವ ಪಾಸ್‌ಗಳನ್ನು ಪಡೆದುಕೊಂಡು ಅದೇ ಪಾಸ್ ದುರುಪಯೋಗ ಪಡಿಸಿಕೊಂಡು ಬೇಕಾದ ಸ್ಥಳಗಳಲ್ಲಿ ಮರಳು ತುಂಬಿಕೊಂಡು ಒಂದೇ ಪಾಸ್ ನಲ್ಲಿ ನಾಲ್ಕು ಐದು ಟ್ರಿಪ್‌ಗಳನ್ನು ಅಕ್ರಮ ಮರಳು ಸಾಕಾಣಿಕೆ ಮಾಡುತ್ತಿದ್ದಾರೆ.
ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಇದ್ದರೂ ಸಂಬಂಧಪಟ್ಟ ಇಲಾಖೆಯ ಕಣ್ಣು ತಪ್ಪಿಸಿ ಜಿಪಿಎಸ್ ಬಂದ್ ಮಾಡಿ ಮರಳು ಗುತ್ತಿಗೆದಾರರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಸಕ್ರಮದ ಹೆಸರಿನಲ್ಲಿ ಅಕ್ರಮ ಮಾರಾಟ ನಡೆಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಳಿಸಿ ದಂಧೆಕೋರರ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಸುಲೇಮಾನ್ ಆಡೂರ, ಬಸವರಾಜ ಮರಾಠಿ, ಪ್ರವೀಣ ಆಚಾರಿ, ಮಹಾಂತೇಶ ಮಣಕವಾಡ, ಬಸವರಾಜ ಅಮರಾಪುರ, ಮಲ್ಲಿಕ ಕಡಕೋಳ, ಸಂಜು ಅಮರಾಪುರ, ಅಶೋಕ ಕುರಿ, ಸುಲೇಮಾನ್ ಬಾರಿಗಿಡದ, ಖಾದರಭಾಷಾ ಶಿರಹಟ್ಟಿ, ಹಾಲಪ್ಪ ಅಂಗಡಿ, ಗಿರೀಶ ಬಸಪ್ಪನವರ, ತೌನೇಷ ಮಂಜಲಾಪುರ, ಮುತ್ತಣ್ಣ ಪೂಜಾರ, ಜಿಲಾನಿ ಸಿದ್ದಿ, ಉಬೇದ ಕಿತ್ತೂರ, ಸಾಹಿಲ್ ಚಂಗಾಪುರಿ, ಮಹಾಂತೇಶ ಯಳವತ್ತಿ, ಪ್ರವೀಣ ನರೇಗಲ್, ಮಂಜುನಾಥ ಡೊಳ್ಳಿನ, ಮಲ್ಲಿಕ ಮುಳಗುಂದ, ಸಿಕಂದರ ಕಲಬುರ್ಗಿ, ನಿಜಾಮ್ ಬಿಜಾಪುರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.