ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕು ಕಚೇರಿಯಲ್ಲಿ ಹಲವು ದಿನಗಳಿಂದ ಸಾರ್ವಜನಿಕರ ಕಡತಗಳು ವಿಲೇವಾರಿ ಆಗದೆ ಬಾಕಿ ಉಳಿದಿರುವ ಸಾರ್ವಜನಿಕರಿಗೆ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಿಕೊಡಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಿರಾ ತಾಲೂಕು ಕಚೇರಿಯಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಅವರು, ಶಿರಾ ತಹಶೀಲ್ದಾರ್ ರವರ ಲಾಗಿನ್ ನಲ್ಲಿ ನೂರಾರು ಕಡತಗಳು ಅನುಮೋದನೆಗಾಗಿ ಕಾಯುತ್ತಿವೆ. ಅವುಗಳಿಗೆ ಶೀಘ್ರ ಮುಕ್ತಿ ದೊರಕಬೇಕಿದೆ. ತಾಲೂಕಿನ ಬುಕ್ಕಾಪಟ್ಟಣ, ಕಳ್ಳಂಬೆಳ್ಳ, ಕಸಬಾ ಮತ್ತು ಗೌಡಗೆರೆ ನಾಲ್ಕು ಹೋಬಳಿಗಳಲ್ಲಿ ಬಗರ್ ಹುಕುಂ ಸಕ್ರಮ ಸಮಿತಿಯ ಸಭೆಗಳಲ್ಲಿ ಅನುಮೋದನೆಗೊಂಡ 700 ರಿಂದ 800 ಸಾಗುವಳಿ ಚೀಟಿದಾರರಿಗೆ ನೀಡಿರುವ ಸಾಗುವಳಿ ಚೀಟಿಯಂತೆ ಖಾತೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಬೇಕಿದೆ. ತಹಸೀಲ್ದಾರ್ ರವರ ಕಚೇರಿಯಲ್ಲಿ ಪ್ರತಿ ದಿನ ವಿಷಯ ನಿರ್ವಾಹಕರುಗಳು ಅಂದೇ ಅಥವಾ ಮಾರನೇ ದಿವಸ ಅನುಮೋದನೆಯನ್ನ ಪೂರ್ಣಗೊಳಿಸಬೇಕು. ನೂರಾರು ಜನ ರೈತರು ಕಚೇರಿಗೆ ಅಲೆಯುವುದನ್ನ ತಪ್ಪಿಸಲು ಕ್ರಮ ಕೈಗೊಳ್ಳುವುದು. ರೆಕಾರ್ಡ್ ರೂಂನಲ್ಲಿ ಸಾರ್ವಜನಿಕರು ಕೋರುವ ದಾಖಲೆಗಳನ್ನು ನಿಯಮಾನುಸಾರ ತುರ್ತಾಗಿ ದಾಖಲೆಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದು. ಈ ಎಲ್ಲಾ ವಿಷಯಗಳನ್ನು ಜಿಲ್ಲಾಧಿಕಾರಿಗಳು ಸಾರ್ವಜನಿಕ ಹಿತದೃಷ್ಠಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜಿ ಸಲ್ಲಿಸಲು ಆಗಮಿಸುವ ಜನರಿಗೆ ಮೂಲಸೌಕರ್ಯಗಳನ್ನು ಸಹ ನೀಡಬೇಕು ಎಂದು ಒತ್ತಾಯಿಸಿದರು.