ಡೊನೇಷನ್ ಹಾವಳಿ ತಡೆಗಟ್ಟಲು ಡಿಸಿಗೆ ಮನವಿ

| Published : May 17 2024, 12:33 AM IST

ಸಾರಾಂಶ

ಜಿಲ್ಲಾ ರೆಗುಲೇಟಿಂಗ್ ಪ್ರಾಧಿಕಾರ ರಚಿಸುವಂತೆ ಸರ್ಕಾರದ ನಿಯಮ ಗಾಳಿಗೆ ತೂರಿದ ಶಾಲೆಗಳ ಮಾನ್ಯತೆ ರದ್ದು ಮಾಡಿ, ಅನಧಿಕೃತವಾಗಿ ಶಾಲೆಗಳ ಮಾನ್ಯತೆ ಇಲ್ಲದೆ ಐಸಿಐಸಿ/ ಸಿಬಿಎಸ್ಸಿ ನಡೆಸುವ ಶಾಲೆಗಳ ಮಾನ್ಯತೆ ರದ್ದುಗೊಳಿಸಿ, ಅಧಿಕೃತ ಶಾಲೆಗಳ ಕನ್ನಡ ಮಾಧ್ಯಮ/ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಎಸ್ಎಫ್ಐ ಜಿಲ್ಲಾ ಸಮಿತಿ ಒತ್ತಾಯ.

ಕನ್ನಡಪ್ರಭ ವಾರ್ತೆ ಬೀದರ್‌

ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಜಿಲ್ಲಾ ಸಮಿತಿಯು ಜಿಲ್ಲೆಯಾದ್ಯಂತ ಖಾಸಗಿ ಶಾಲೆಗಳು 2024 25 ನೇ ಸಾಲಿನ ಪ್ರವೇಶ ಶುಲ್ಕ, ಬಟ್ಟೆ, ಶೂ ಸಾಕ್ಸ್, ಟೈ- ಬೆಲ್ಟ್ ಸ್ಮಾರ್ಟ್‌ ಕ್ಲಾಸ್ ಶುಲ್ಕ, ಟ್ಯೂಷನ್ ಶುಲ್ಕವನ್ನು ಹೆಚ್ಚಿಗೆ ಮಾಡಿ ಡೊನೇಷನ್ ವಸೂಲಿ ಮಾಡಲು ಮುಂದಾಗಿರುವುದನ್ನು ಎಸ್ಎಫ್ಐ ಜಿಲ್ಲಾ ಸಮಿತಿ ಖಂಡಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.

ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಖಾಸಗಿ ಶಾಲೆಗಳು ಈಗಾಗಲೇ ಬೇಬಿ ಕ್ಲಾಸಿನಿಂದ ಎಲ್ಲಾ ತರಗತಿಯ ಪ್ರವೇಶಾತಿಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳ ಪಾಲಕರಿಂದ ಮನಬಂದಂತೆ ಡೊನೇಷನ್ ವಸೂಲಿಗೆ ಮುಂದಾಗಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರು ಜಿಲ್ಲಾ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ಇನ್ನು ಈ ವರ್ಷದ ಶೈಕ್ಷಣಿಕ ಪ್ರವೇಶಾತಿಯನ್ನು ಪ್ರಾರಂಭ ಮಾಡದಿದ್ದರೂ ಖಾಸಗಿ ಶಾಲೆಗಳು ತುದಿಕಾಲಲ್ಲಿ ನಿಂತು ಪ್ರವೇಶಾತಿ ಶುಲ್ಕ ಹಾಗೂ ಬಟ್ಟೆ ಶೂ, ಸಾಕ್ಸ್‌, ನೋಟ್‌ಬುಕ್‌ ಗಳನ್ನು ಶಾಲೆಗಳಲ್ಲಿ ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರ. ಇಂತಹ ಶಾಲೆಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. 2024 25 ನೇ ಶೈಕ್ಷಣಿಕ ವರ್ಷದ ವಾರ್ಷಿಕ ಶುಲ್ಕದಲ್ಲಿ ಕೇವಲ ಬೋಧನ ಶುಲ್ಕ ಮಾತ್ರ ವಸೂಲಿ ಮಾಡಬೇಕು. ಯಾವುದೇ ಕಾರಣಕ್ಕೂ ಆನ್‌ಲೈನ್ ಶಿಕ್ಷಣ ನೀಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

1983ರ ಶಿಕ್ಷಣ ಕಾಯ್ದೆ ಎಲ್ಲಾ ಖಾಸಗಿ ಶಾಲೆಗಳು ಪ್ರವೇಶಾತಿಗೆ ಖಾಲಿ ಇರುವ ಸೀಟುಗಳನ್ನು ನೋಟಿಸ್ ಬೋರ್ಡ್‌ಗೆ ಹಾಕಬೇಕು. ಮತ್ತು ರೋಸ್ಟರ್ ಪ್ರಕಾರ ಸೀಟು ಹಾಗೂ ಶುಲ್ಕ ನಿಗದಿಗೊಳಿಸಿ ಶಾಲೆಯ ಮುಂಭಾಗದಲ್ಲಿ ಪ್ಲೆಕ್ಸ್‌ ಹಾಕಬೇಕು ಎಂದು ನಿಯಮ ಇದ್ದರು ಜಿಲ್ಲೆಯ ಯಾವ ಶಾಲೆಗಳು ಸಹ ಹಾಕಿರುವುದಿಲ್ಲ. ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ರಮ ಜರುಗಿಸಲು ಮುಂದಾಗಿಲ್ಲ. ಸರ್ಕಾರ ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಲು ಜಿಲ್ಲೆಯ ಬಿಇಒಗಳು ಪ್ರಕಟಿಸಿಲ್ಲ ಯಾಕೆ? ಖಾಸಗಿ ಶಾಲೆಗಳ ಜೊತೆ ಹೊಂದಾಣಿಕೆ ಆಗಿದ್ದಾರೆ ಎಂಬ ಪ್ರಶ್ನೆ ಬರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಡೊನೇಶನ್ ಹಾವಳಿ ನಿಯಂತ್ರಣ ಮಾಡಬೇಕು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ರೆಗುಲೇಟಿಂಗ್ ಪ್ರಾಧಿಕಾರ ರಚಿಸಿ, ಸರ್ಕಾರದ ನಿಯಮ ಗಾಳಿಗೆ ತೂರಿದ ಶಾಲೆಗಳ ಮಾನ್ಯತೆ ರದ್ದು ಮಾಡಿ, ಅನಧಿಕೃತವಾಗಿ ಶಾಲೆಗಳ ಮಾನ್ಯತೆ ಇಲ್ಲದೆ ಐಸಿಐಸಿ/ ಸಿಬಿಎಸ್ಸಿ.ನಡೆಸುವ ಶಾಲೆಗಳ ಮಾನ್ಯತೆ ರದ್ದುಗೊಳಿಸಿ, ಅಧಿಕೃತ ಶಾಲೆಗಳ ಕನ್ನಡ ಮಾಧ್ಯಮ/ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಎಸ್ಎಫ್ಐ ವತಿಯಿಂದ ಜಿಲ್ಲಾಧಿಕಾರಿಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಎಫ್.ಐ ಜಿಲ್ಲಾಧ್ಯಕ್ಷ ಅರುಣ ಕೊಡಗೆ, ಅಮರ ಗಾದಗಿ, ರೋಷನ್ ಮಲ್ಕಾಪೂರೆ ಇದ್ದರು.