ಸಾರಾಂಶ
ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬೇರ್ ಫೂಟ್ ಟಿಕ್ನಿಷಿಯನ್ಸ್(ಬಿಎಫ್‌ಟಿ) ಹಾಗೂ ಜಿಕೆಎಂಗಳ ಬಾಕಿ ವೇತನ ಬಿಡುಗಡೆಗೆ ಅಗ್ರಹಿಸಿ ರಾಜ್ಯ ಬೇರ್ ಫೂಟ್ ಟಿಕ್ನಿಷಿಯನ್ಸ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಪಂ ಕಾರ್ಯನಿರ್ವಾಹಕಾಧಿಕಾರಿ ವೈ.ಎಚ್. ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬೇರ್ ಫೂಟ್ ಟಿಕ್ನಿಷಿಯನ್ಸ್(ಬಿಎಫ್‌ಟಿ) ಹಾಗೂ ಜಿಕೆಎಂಗಳ ಬಾಕಿ ವೇತನ ಬಿಡುಗಡೆಗೆ ಅಗ್ರಹಿಸಿ ರಾಜ್ಯ ಬೇರ್ ಫೂಟ್ ಟಿಕ್ನಿಷಿಯನ್ಸ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಪಂ ಕಾರ್ಯನಿರ್ವಾಹಕಾಧಿಕಾರಿ ವೈ.ಎಚ್. ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.ಕಳೆದ ಹಲವಾರು ವರ್ಷಗಳಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಪಂ ಹಾಗೂ ಗ್ರಾಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಫ್‌ಟಿ ಹಾಗೂ ಜಿಕೆಎಂಗಳಿಗೆ ನಾಲ್ಕು ತಿಂಗಳಿನಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿರುವುದಿಲ್ಲ ಇದರಿಂದ ನಮಗೆ ಜೀವನ ನಡೆಸಲು ಆರ್ಥಿಕ ಸಂಕಷ್ಟ ಪಡುತ್ತಿದ್ದೇವೆ ಎಂದು ಸಂಘದ ಪದಾಧಿಕಾರಿಗಳು ಅಳಲು ತೊಡಿಕೊಂಡರು.
ನಾವು ಸಹ ಕೂಲಿಕಾರರ ಕುಟುಂಬದಿಂದ ಬಂದವರಾಗಿದ್ದು, ವಯಸ್ಸಾದ ತಂದೆ-ತಾಯಿಗಳ ಯೋಗಕ್ಷೇಮ ಮತ್ತು ಕುಟುಂಬ ನಿರ್ವಹಣೆ, ದಿನಬಳಕೆಯ ಅವಶ್ಯಕ ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶ ಶುಲ್ಕ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚಗಳು ಪ್ರಯಾಣ ವೆಚ್ಚಗಳು, ಸಾಲಗಳ ಮರುವಾವತಿ ಸೇರಿದಂತೆ ಇತರೆ ಖರ್ಚು ನಿಭಾಯಿಸಲು ಸಾಧ್ಯವಾಗದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ನಮ್ಮ ಸಹಭಾಗಿತ್ವ ಹೆಚ್ಚಿದ್ದು, ಕರ್ನಾಟಕ ರಾಜ್ಯದಾದ್ಯಂತ ೧೫೮೭ ಜನ ಬಿಎಫ್‌ಟಿಗಳು ಕಾರ್ಯನಿರ್ವಹಿಸುತ್ತಿದ್ದು, ಬಾಕಿ ವೇತನ ಪಾವತಿ ವಿಚಾರವಾಗಿ ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಕೂಡಲೇ ಬಾಕಿ ವೇತನ ಬಿಡುಗಡೆಗೆ ಅಗತ್ಯ ಕ್ರಮವಹಿಸಬೇಕು ಮತ್ತು ಬಿಎಫ್‌ಟಿ ಹುದ್ದೆ ಪ್ರತಿವರ್ಷ ನವೀಕರಿಸುವ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಬೇರ್ ಫೂಟ್ ಟಿಕ್ನಿಷಿಯನ್ಸ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಆಡಳಿತ ನಿರ್ದೇಶಕ ಬಸವರಾಜ, ಜಿಲ್ಲಾ ಗೌರವಾಧ್ಯಕ್ಷ ರಾಮಪ್ಪ, ತಾಲೂಕು ಅಧ್ಯಕ್ಷ ನಾಗರಾಜ, ಕಾಂತರಾಜ, ಕೊಟ್ರೇಶ, ಪಿಡಿಒ ಉಮೇಶ ಸೇರಿದಂತೆ ಮತ್ತಿತರಿದ್ದರು.