ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಕಾವೇರಿ ಪದವಿಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಶಿಕ್ಷಣ ಸಚಿವರಿಗೆ, ವಿರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಬೆಂಗಳೂರಿನಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.1968ರಲ್ಲಿ ಪ್ರಾರಂಭವಾಗಿ ಸುಮಾರು 55 ವರ್ಷಗಳಿಂದ ಕಾವೇರಿ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು, ವಿರಾಜಪೇಟೆಯಲ್ಲಿ ಎರಡು ಸಂಸ್ಥೆಗಳು ಉತ್ತಮ ಫಲಿತಾಂಶ, ಗುಣಮಟ್ಟದ ಶಿಕ್ಷಣದ ಸಾಧನೆ, ಉತ್ತಮ ಮೂಲ ಸೌಕರ್ಯ ಸೇರಿದಂತೆ ಜಿಲ್ಲೆಯಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 20 ವರ್ಷಗಳ ಹಿಂದೆ ಸರ್ಕಾರದ ಆದೇಶದಂತೆ ಪ್ರಥಮ ದರ್ಜೆ ಹಾಗೂ ಪಿಯು ಕಾಲೇಜುಗಳನ್ನು ಬೇರ್ಪಡಿಸಿದಾಗ, ಪಿಯು ಕಾಲೇಜು ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಅನುದಾನಕ್ಕೆ ಒಳಪಡಬೇಕಾಗಿತ್ತು. ಆದರೆ ಅಂದು ಅದು ಆಗಲಿಲ್ಲ. ಹಾಗಾಗಿ ಈ ಎರಡು ಕಾಲೇಜು ಸಂಸ್ಥೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಆರ್ಥಿಕ ಇಲಾಖೆಗೆ ಮರು ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ಅನುದಾನಕ್ಕೆ ಒಳಪಡಿಸಲು ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾವೇರಿ ಕಾಲೇಜಿನ ಅಧ್ಯಕ್ಷರಾದ ಸುಗುಣ ಮುತ್ತಣ್ಣ, ಕೆಜಿ ಗೋಪಾಲಕೃಷ್ಣ ಭಟ್, ಡಾ. ಅಕ್ರಂ, ಚೇತನ್ ಚಿನ್ನಪ್ಪ ಉಪಸ್ಥಿತರಿದ್ದರು.