ಪ್ರೋತ್ಸಾಹಧನ ಹೆಚ್ಚಿಸುವಂತೆ ಮನವಿ

| Published : Jul 10 2025, 01:46 AM IST

ಸಾರಾಂಶ

ಅತಿ ಕನಿಷ್ಠ ವೇತನದಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಸೂಕ್ತ ನ್ಯಾಯ ಒದಗಿಸಿ ನಮಗೆ ಬದುಕಲು ಅವಕಾಶ ಮಾಡಿ ಕೊಡಿ

ಅಂಕೋಲಾ: ಸಮಾಜದ ಕಳಿಕಳಿಯ ಕಣ್ಣಾಗಿ, ಅವಿಶ್ರಾಂತವಾಗಿ ದುಡಿಯುತ್ತಿರುವ ನಮಗೆ ನೀಡುತ್ತಿರುವ ಪ್ರೋತ್ಸಾಹ ಧನ ಭರವಸೆ ನೀಡಿದಂತೆ ಹೆಚ್ಚಿಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ತಾಲೂಕಾಧ್ಯಕ್ಷೆ ಚಂದ್ರಕಲಾ ನಾಯ್ಕ ಮಾತನಾಡಿ, ಆರೋಗ್ಯ ಸಚಿವ ಜೆ.ಪಿ.ನಡ್ಡಾ ರಾಜ್ಯಸಭೆಗೆ ಮಾಹಿತಿ ನೀಡಿ ರಾಷ್ಟ್ರೀಯ ಆರೋಗ್ಯ ಮಿಷನ್ನ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಹೆಚ್ಚಿಸಲು ನಿರ್ಧರಿಸಿದೆ. ಹಾಗೆ ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದ್ದರು. ಆದರೆ ಇದ್ಯಾವದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ಅತಿ ಕನಿಷ್ಠ ವೇತನದಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಸೂಕ್ತ ನ್ಯಾಯ ಒದಗಿಸಿ ನಮಗೆ ಬದುಕಲು ಅವಕಾಶ ಮಾಡಿ ಕೊಡಿ ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಸೌಭಾಗ್ಯ ಬಂಟ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಗೌರವಧನ, ಪ್ರೋತ್ಸಾಹಧನದ ಹೆಸರಿನಲ್ಲಿ ದೇಶದ ಲಕ್ಷಾಂತರ ಮಹಿಳಾ ಕಾರ್ಮಿಕರನ್ನು ಕಾರ್ಯಕರ್ತೆಯರೆಂದು ಸೇವೆ ಪಡೆದುಕೊಳ್ಳುತ್ತಾ ಕಾರ್ಮಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿ ಶೋಷಣೆಗೆ ಒಳಗಾಗಿದ್ದೇವೆ.

ಸರ್ಕಾರ ನಮ್ಮ ಸೇವೆಗೆ ತಕ್ಕ ಪ್ರತಿಫಲ ನೀಡುತ್ತಿಲ್ಲ.ಕೇಂದ್ರ ಸರ್ಕಾರ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸಿ ಆಶಾ ಕಾರ್ಯಕರ್ತೆಯರನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ ಡಾ. ಚಿಕ್ಕಪ್ಪ ನಾಯಕ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸೌಭಾಗ್ಯ ಬಂಟ, ಲಲೀನಿ ನಾಯಕ, ದಿವ್ಯಾ ನಾಯ್ಕ, ರೇಷ್ಮಾ ಬೋವಿ, ನೇತ್ರಾ ನಾಯ್ಕ, ಮಹಾಲಕ್ನಿ ನಾಯ್ಕ, ಗೌರಿ ಗೌಡ, ಸುನೀತಾ ಗಾಂವಕರ, ರಾಧಿಕಾ ಗೌಡ, ಸುಮತಿ ನಾಯಕ, ನಾಗೇಂದ್ರಿ ಗೌಡ ಸೇರಿದಂತೆ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.