ಹಳಿಯಾಳ: ಶಾಂತಿ, ಸೌಹಾರ್ದ ಮತ್ತು ಕಾನೂನು ಪಾಲನೆಗೆ ಹೆಸರುವಾಸಿಯಾದ ಹಳಿಯಾಳ ಪಟ್ಟಣದಲ್ಲಿ ಸಮಾಜವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಹಳಿಯಾಳ ತಾಲೂಕು ಕನ್ನಡ ರಕ್ಷಣಾ ವೇದಿಕೆ ಘಟಕ ಆಗ್ರಹಿಸಿದೆ.

ಶನಿವಾರ ಸಾಂಕೇತಿಕ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಕರವೇ ಘಟಕದ ಪದಾಧಿಕಾರಿಗಳ ನಿಯೋಗವು ತಾಲೂಕಾಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ್‌ ಫಿರೋಜಷಾ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಮೌರ್ಯ-ಬಾರ್ ರೆಸ್ಟಾರೆಂಟ್ ಕ್ಲಬ್ ಗಲಾಟೆ: ಇತ್ತೀಚೆಗೆಯಷ್ಟೇ ಹಳಿಯಾಳ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿರುವ ಮೌರ್ಯ ಬಾರ್ ರೆಸ್ಟಾರೆಂಟ್ ಕ್ಲಬ್‌ನಲ್ಲಿ ನಡೆದ ಘಟನೆಯಲ್ಲಿ ಮಚ್ಚ ಮಂಜುನಾಥ ಎಂಬ ವ್ಯಕ್ತಿಯು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸುವ ಮೂಲಕ ಕಾನೂನು ಮತ್ತು ಆಡಳಿತ ವ್ಯವಸ್ಥೆಗೆ ನೇರವಾಗಿ ಸವಾಲೆಸೆದಂತಾಗಿದೆ. ಕಾನೂನು ಜಾರಿಗೊಳಿಸುವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ಸಮಾಜ ವಿರೋಧಿ ಶಕ್ತಿಗಳು ಬೆಳೆದಿರುವುದು ಹಳಿಯಾಳದ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರವಾದ ಆತಂಕವನ್ನು ಮೂಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗೂಂಡಾ ಕಾಯ್ದೆ ಅನ್ವಯಿಸಿ: ಪೊಲೀಸ್‌ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸುವ ಧೈರ್ಯ ತೋರಿರುವ ವ್ಯಕ್ತಿ ಸಾಮಾನ್ಯ ಅಪರಾಧಿಯಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಆದುದರಿಂದ ಈ ಪ್ರಕರಣವನ್ನು ಸಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಸವಾಲೊಡ್ಡುವ ಗಂಭೀರ ಪ್ರಕರಣವೆಂದು ಪರಿಗಣಿಸಿ ಆರೋಪಿಯ ವಿರುದ್ಧ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿಣ ಕ್ರಮ ಜರುಗಿಸಿ, ಇಂತಹ ಸಮಾಜ ವಿರೋಧಿ ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ದೆ ಬಳಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಹಳಿಯಾಳ ತಾಲೂಕು ಕರವೇ ಘಟಕದ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಗೌರವ ಅಧ್ಯಕ್ಷ ವಿಜಯ ಪಡ್ನೀಸ್, ಉಪಾಧ್ಯಕ್ಷ ಚಂದ್ರಕಾಂತ ದುರ್ವೆ, ವಿನೋದ್ ದೊಡ್ಡಮನಿ, ಕಾರ್ಯದರ್ಶಿ ಮಹೇಶ್ ಆನೆಗುಂದಿ, ರೈತ ಘಟಕ ಅಧ್ಯಕ್ಷ ಸುರೇಶ್ ಕೋಕಿತಕರ, ರಾಮಾ ಜಾವಳೇಕರ, ಉದಯ ಮುನವಳ್ಳಿ, ಅಶೋಕ ಪಾಟೀಲ, ತಿಪ್ಪಣ್ಣ ಕಲಗುಡಿ, ಆನಂದ ಮಠಪತಿ, ಬುಮಿರಾಜ ಪೂಜಾರ, ಅರ್ಜುನ ಗರಗ, ಸದಾ ಮುನವಳ್ಳಿ, ರಾಜು ತೊರ್ಲೆಕರ ಹಾಗೂ ಇತರರು ಇದ್ದರು.

ಕಠಿಣ ಸಂದೇಶ ರವಾನಿಸಿ: ಹಳಿಯಾಳ ಪಟ್ಟಣದಲ್ಲಿ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಕಾನೂನನ್ನು ಕೈಗೆತ್ತಿಕೊಳ್ಳವವರಿಗೆ ಯಾವುದೇ ರೀತಿಯ ರಾಜಕೀಯ ಅಥವಾ ಇತರ ಪ್ರಭಾವಗಳಿಂದ ರಕ್ಷಣೆ ಸಿಗದಂತೆ ನಮ್ಮ ಆಡಳಿತ ವ್ಯವಸ್ಥೆ ಕಟ್ಟುನಿಟ್ಟಾಗಿ ನಿಲುವು ತಾಳಬೇಕು. ಸಾರ್ವಜನಿಕರ ಶಾಂತಿ, ಸುರಕ್ಷತೆ ಹಾಗೂ ಹಳಿಯಾಳ ಪಟ್ಟಣದ ಗೌರವವನ್ನು ಕಾಪಾಡುವ ದೃಷ್ಟಿಯಿಂದ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಂಡು ಸಮಾಜ ವಿರೋಧಿ ಶಕ್ತಿಗಳಿಗೆ ಸ್ಪಷ್ಟ ಹಾಗೂ ಕಠಿಣ ಸಂದೇಶ ರವಾನಿಸಬೇಕೆಂದು ಹಳಿಯಾಳ ಪಟ್ಟಣವಾಸಿಗಳ ಪರವಾಗಿ ಆಗ್ರಹಿಸುತ್ತೇವೆ ಎಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಹೇಳಿದರು.