ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಇಲ್ಲಿಯ ಕಾವೇರಿ ನದಿಯು ದಿನದಿಂದ ದಿನಕ್ಕೆ ಮಲೀನಗೊಳ್ಳುತ್ತಿದ್ದು, ಈ ಸಂಬಂಧ ಕಾವೇರಿ ನದಿಯ ಸ್ವಚ್ಛತೆ ಮತ್ತು ನದಿಯ ಅಭಿವೃದ್ಧಿಗೆ ವ್ಯವಸ್ಥೆ ಮಾಡಿಸಿಕೊಡುವಂತೆ ಶಾಸಕ ಎ. ಮಂಜು ಅವರಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ರಾಮನಾಥಪುರ ಪವಿತ್ರ ಯಾತ್ರಾ ಕ್ಷೇತ್ರವಾಗಿದ್ದು, ಪ್ರತಿನಿತ್ಯ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಕಾವೇರಿ ನದಿಯು ಇಲ್ಲಿ ಹರಿದು ಕ್ಷೇತ್ರದ ಮಹಿಮೆಯನ್ನು ಇಮ್ಮಡಿಗೊಳಿಸಿದೆ. ಇಲ್ಲಿನ ದೇವಾಲಯಗಳು ಭಕ್ತರ ಶ್ರದ್ಧಾ ಕೇಂದ್ರಗಳಾಗಿವೆ. ವಿಷಾಧದ ಸಂಗತಿಯೆಂದರೆ ಕಾವೇರಿಯು ದಿನಕಳೆದಂತೆ ಹೆಚ್ಚು ಹೆಚ್ಚು ಮಲೀನವಾಗುತ್ತಿದ್ದು, ಭಯಂಕರ ವಾತಾವರಣವನ್ನು ಸೃಷ್ಟಿ ಮಾಡಿದೆ. ರಾಮನಾಥಪುರಕ್ಕೆ ಬರುವ ಭಕ್ತರು ಪ್ರತಿನಿತ್ಯ ಹೋಮ- ಹವನಾದಿಗಳನ್ನು ನದಿಯ ಒಳಾಂಗಣದಲ್ಲಿ ಮಾಡುವುದು, ಸ್ನಾನ ಮಾಡಿ ತಾವು ತೊಟ್ಟ ಬಟ್ಟೆಗಳನ್ನು ನದಿಯಲ್ಲಿಯೇ ಬಿಸಾಡುವುದು, ಫೋಟೋಗಳು, ಪೂಜಾ ತ್ಯಾಜ್ಯಗಳನ್ನು ನದಿಯಲ್ಲಿ ಬಿಡುವುದು ವಾಡಿಕೆಯಾಗಿದೆ ಎಂದು ತಿಳಿಸಿದರು.
ನದಿಯಲ್ಲಿ ರಾಶಿ ರಾಶಿ ಬಟ್ಟೆಗಳನ್ನು ಹಾಕಿರುವುದರ ಜೊತೆಗೆ ನದಿಯಲ್ಲಿ ಮಲ -ಮೂತ್ರ ವಿಸರ್ಜನೆ ಮಾಡುವುದರಿಂದ ವಾಸನೆಗೆ ನದಿಗೆ ಬರುವ ಭಕ್ತರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ವರ್ಷವಿಡೀ ಬೇರೆ ಬೇರೆ ಗ್ರಾಮಗಳಿಂದ ದೇವರನ್ನು ಲಾರಿ, ಟ್ರ್ಯಾಕ್ಟರ್, ಆಟೋಗಳಲ್ಲಿ ತಂದು ಪೂಜೆ ನಂತರ ನದಿಯಲ್ಲಿ ಬಾಳೆಕಂದು, ಮಾವಿನಸೊಪ್ಪು, ಊಟದ ತಟ್ಟೆಗಳು ಮುಂತಾದ ತ್ಯಾಜ್ಯಗಳನ್ನು ನದಿಯಲ್ಲಿ ಬೀಸಾಡುತ್ತಾರೆ. ಇದರಿಂದ ನದಿಯ ನೀರು ಕೊಳೆತು ನಾರುತ್ತಿರುವುದು ದಿನನಿತ್ಯದ ಸಂಗತಿಯಾಗಿದೆ. ಇದಲ್ಲದೇ ದೇವರನ್ನು ತರುವವರು ಡೋಲು, ತಮಟೆ ಮುಂತಾದ ವಾದ್ಯಗಳನ್ನು ಹಗಲು ಅಲ್ಲದೇ ನಡುರಾತ್ರಿಯೂ ಬಡಿದು ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದಾರೆ. ನದಿಯ ಮಧ್ಯ ಹಾಗೂ ನದಿಯ ಅಕ್ಕಪಕ್ಕದಲ್ಲಿ ಮರಗಿಡಗಳು ಬೆಳೆದು ನಿಂತಿವೆ. ಈ ಜಾಗದಲ್ಲಿ ಮಲ-ಮೂತ್ರ ಮಾಡುತ್ತಾರೆ. ಇದನ್ನು ತಪ್ಪಿಸಲು ನದಿಯ ದಂಡೆಯಲ್ಲಿರುವ ಸ್ಥಳದಲ್ಲಿ ಶೌಚಾಲಯದ ಅವಶ್ಯಕತೆಯಿದೆ ಹಾಗೂ ಗ್ರಾಪಂ ವತಿಯಿಂದ ಸ್ವಚ್ಛತೆ ಕಾಪಾಡಲು ಗಾರ್ಡ್ ನ ವ್ಯವಸ್ಥೆ ಮಾಡುವಂತೆ ಶಾಸಕರಲ್ಲಿ ಸಮಿತಿಯವರು ಮನವಿ ಮಾಡಿದರು.ಶಾಸಕರು ಮಂಜು ಮನವಿ ಸ್ವೀಕರಿಸಿ ಮಾತನಾಡಿ, ಶೃಂಗೇರಿ, ಹೊರನಾಡು ಮುಂತಾದ ಕಡೆ ಇರುವ ರೀತಿ ನದಿಯ ದಂಡೆಗೆ ಕಬ್ಬಿಣದ ಬಾಗಿಲು ಮತ್ತು ಗಾರ್ಡ್ ಗಳನ್ನು ನೇಮಿಸುವಂತೆ ಸಂಬಂಧ ಪಟ್ಟ ಗ್ರಾಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಲ್ಲದೇ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯವರು ಸುಮಾರು ಹತ್ತಾರು ವರ್ಷಗಳಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಪ್ರತಿ ಹುಣ್ಣಿಮೆ ಹಾಗೂ ಇತರೆ ದಿವಸಗಳಲ್ಲಿ ಮಾಡಿಕೊಂಡು ಬರುತ್ತಿದ್ದಾರೆ, ಇವರಿಗೆ ಕೈಜೋಡಿಸುವುದು ನಮ್ಮ ಮತ್ತು ನಿಮ್ಮ ಕರ್ತವ್ಯವಾಗಿದೆ. ಕಾವೇರಿ ನದಿಯಿಂದ ಸಾವಿರಾರು ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಅಗುತ್ತಿದೆ. ಇಂತಹ ನದಿಯ ನೀರು ಕಲ್ಮಶವಾಗಿ ಸಾರ್ವಜನಿಕರು ಕುಡಿಯುತ್ತಾರೆ. ಇದರಿಂದ ರೋಗಗಳು ಹೆಚ್ಚುತ್ತಿವೆ. ಅದ್ದರಿಂದ ಸಾರ್ವಜನಿಕರು ಹಾಗೂ ಭಕ್ತರು ನದಿಯಲ್ಲಿ ಬಟ್ಟೆ, ಇನ್ನಿತರ ತ್ಯಾಜ್ಯಗಳನ್ನು ಹಾಕದಂತೆ ಮನವರಿಕೆ ಮಾಡಲು ಗ್ರಾಪಂ ವತಿಯಿಂದ ಒಬ್ಬ ಗಾರ್ಡ್ ನೇಮಿಸಲು ಸಭೆ ಕರೆದು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.ಗ್ರಾಪಂ ಸದಸ್ಯರಾದ ಮೋಹನ್, ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ಪ್ರವೀಣ್, ಅರ್.ಎಸ್, ಕಾರ್ತಿಕ್, ಮುಖಂಡರಾದ ಚೌಡೇಗೌಡ, ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.