ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಐದು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಐದು ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಬೆಳಗ್ಗೆ ಮೂಲ ದೇವತಾ ಪ್ರಾರ್ಥನೆ, ಗಂಗಾ ಪೂಜೆ ನಂತರ ಆರ್ಯವೈಶ್ಯ ಮಹಿಳಾ ಮಂಡಳಿ ವತಿಯಿಂದ ಸುಮಂಗಲಿಯರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮ ವಾಸವಿ ಮಹಲ್ ಸಭಾಂಗಣದಲ್ಲಿ ನಡೆಯಿತು.ಸಂಜೆ ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನ ಬಳಿಯಿಂದ 108 ಕಲಶ ಹೊತ್ತ ಮಹಿಳೆಯರು ಮತ್ತು ಹೊರ ಕಾಣಿಕೆಯನ್ನು ಮಂಗಳವಾದ್ಯದೊಂದಿಗೆ ದೇವಾಲಯಕ್ಕೆ ತರಲಾಯಿತು. ಪೂಜಾ ವಿಧಿ ವಿಧಾನಗಳ ನಂತರ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕುಶಾಲನಗರ ಸ್ಯಾಕ್ಸೋ ಸತೀಶ್ ಮತ್ತು ತಂಡದ ಸದಸ್ಯರಿಂದ ಜುಗಲ್ ಬಂದಿ ಕಾರ್ಯಕ್ರಮ ನಡೆಯಿತು. ಮುಖ್ಯ ಅರ್ಚಕರಾದ ಕೆ.ಜಿ. ಯೋಗೇಶ್ ಭಟ್, ಜೆ.ಆರ್. ಗಿರೀಶ್ ಭಟ್ ಮತ್ತು ಲಕ್ಷ್ಮಿಪ್ರಸಾದ್ ಸಾಂತಿಯಾರ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಉಪಾಧ್ಯಕ್ಷ ಬಿ.ಎಲ್. ಅಶೋಕ್ ಕುಮಾರ್, ಕಾರ್ಯದರ್ಶಿ ಕೆ. ಪ್ರವೀಣ್, ಖಜಾಂಚಿ ಪ್ರಶಾಂತ್ , ನಿರ್ದೇಶಕರು ಮತ್ತು ಮಾಜಿ ಅಧ್ಯಕ್ಷರು, ವಾಸವಿ ಸಂಘದ ವಿವಿಧ ಘಟಕಗಳ ಅಧ್ಯಕ್ಷರು. ಪದಾಧಿಕಾರಿಗಳು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಅಂಗವಾಗಿ ಶುಕ್ರವಾರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ನಂತರ ಸಂಜೆ ಆರು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ದೇವಾಲಯ ಮುಂಭಾಗದ ವೇದಿಕೆಯಲ್ಲಿ ದಾಸವಾಣಿ ಕಾರ್ಯಕ್ರಮವನ್ನು ವಿದ್ವಾನ್ ಡಾ. ವಿದ್ಯಾಭೂಷಣ್ ಮತ್ತು ವೇದ ಭೂಷಣ್ ತಂಡದವರು ನಡೆಸಿಕೊಡಲಿದ್ದಾರೆ.