ಅರಣ್ಯಭೂಮಿ ಅತಿಕ್ರಮಣ ಸಮಸ್ಯೆ ಬಗೆಹರಿಸಲು ಮಂಕಾಳ ವೈದ್ಯರಿಗೆ ಮನವಿ

| Published : Oct 26 2024, 01:10 AM IST

ಅರಣ್ಯಭೂಮಿ ಅತಿಕ್ರಮಣ ಸಮಸ್ಯೆ ಬಗೆಹರಿಸಲು ಮಂಕಾಳ ವೈದ್ಯರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಅರಣ್ಯಭೂಮಿ ಅತಿಕ್ರಮಣದಾರರು ಹಲವು ವರ್ಷಗಳಿಂದ ಪಟ್ಟಾಕ್ಕಾಗಿ ಕಾಯುತ್ತಿದ್ದಾರೆ. ಅತಿಕ್ರಮಣದಾರರಲ್ಲಿ ತಾವು ಅತಿಕ್ರಮಣ ಮಾಡಿದ ಜಾಗ ಸಕ್ರಮ ಆಗುತ್ತದೋ, ಇಲ್ಲವೋ ಎಂಬ ಆತಂಕವೂ ಇದೆ.

ಭಟ್ಕಳ: ತಾಲೂಕು ಅತಿಕ್ರಮಣ ಹೋರಾಟ ಸಮಿತಿಯ ಅಧ್ಯಕ್ಷ ರಾಮ ಮೊಗೇರ ಅವರ ನೇತೃತ್ವದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರನ್ನು ಭೇಟಿ ಮಾಡಿ ಅರಣ್ಯಭೂಮಿ ಅತಿಕ್ರಮಣ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಮನವಿ ಮಾಡಿದರು.

ಭಟ್ಕಳ ಸೇರಿದಂತೆ ಜಿಲ್ಲೆಯಲ್ಲಿ ಅರಣ್ಯಭೂಮಿ ಅತಿಕ್ರಮಣದಾರರು ಹಲವು ವರ್ಷಗಳಿಂದ ಪಟ್ಟಾಕ್ಕಾಗಿ ಕಾಯುತ್ತಿದ್ದಾರೆ. ಅತಿಕ್ರಮಣದಾರರಲ್ಲಿ ತಾವು ಅತಿಕ್ರಮಣ ಮಾಡಿದ ಜಾಗ ಸಕ್ರಮ ಆಗುತ್ತದೋ, ಇಲ್ಲವೋ ಎಂಬ ಆತಂಕವೂ ಇದೆ. ಅತಿಕ್ರಮಣ ಜಾಗವನ್ನೇ ನಂಬಿ ಮನೆ, ತೋಟ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ನಿರಂತರ ಹೋರಾಟ ಆಗುತ್ತಿದ್ದರೂ ಇನ್ನೂ ತನಕ ಅತಿಕ್ರಮಣದಾರರಿಗೆ ನ್ಯಾಯ ಸಿಕ್ಕಿಲ್ಲ. ರಾಜ್ಯ ಸರ್ಕಾರ ಅತಿಕ್ರಮಣದಾರರ ನೆರವಿಗೆ ಬರಬೇಕು ಎಂದು ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಹೇಳಿದರು.

ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿರುವುದಕ್ಕೆ ಸಚಿವರ ಬಳಿ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತ ಪಡಿಸಿದ ಅವರು, ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿರುವುದರಿಂದ ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೊಳಪಡುವ ಪ್ರದೇಶದ ಜನರು ನಿಟ್ಟುಸಿರು ಬಿಡುವಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ ಅವರು, ಅತಿಕ್ರಮಣದಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕೂಲಂಕಷವಾಗಿ ಪರಿಶೀಲನೆ ನಡೆಸಿ ಕಸ್ತೂರಿರಂಗನ್ ವರದಿ ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ವರದಿ ಜಾರಿ ಬೇಡ ಎಂದು ಪ್ರಸ್ತಾವನೆ ಕಳುಹಿಸಿದೆ.

ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ವರದಿ ಜಾರಿ ಮಾಡುವುದನ್ನು ಕೈಬಿಡಬೇಕಿದೆ. ರಾಜ್ಯದಲ್ಲಿ ಹಳೆ ಅತಿಕ್ರಮಣದಾರರ ಪರವಾಗಿ ರಾಜ್ಯ ಸರ್ಕಾರ ನಿಂತಿದೆ. ಇವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಆದರೆ ಹೊಸ ಅತಿಕ್ರಮಣಕ್ಕೆ ಯಾರೂ ಮುಂದಾಗಬಾರದು. ಕೇಂದ್ರ ಸರ್ಕಾರ ಅತಿಕ್ರಮಣದಾರರ ಪರವಾಗಿ ನಿಲ್ಲಬೇಕು. ಸಂಸದರು ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಿ ಅತಿಕ್ರಮಣದಾರರಿಗೆ ನ್ಯಾಯ ದೊರಕಿಸಿಕೊಡಬೇಕು. ೨೦೦೬ರಲ್ಲಿ ಜಾರಿಗೆ ತಂದ ಅರಣ್ಯ ಹಕ್ಕು ಕಾಯ್ದೆಯಲ್ಲೂ ಬದಲಾವಣೆ ತರಬೇಕು.

ಅದರಲ್ಲಿ ಪರಿಶಿಷ್ಟ ಪಂಗಡ ಮತ್ತು ಜಾತಿಗೆ ಮಾತ್ರ ನೀಡಿದ ಅವಕಾಶವನ್ನು ಇತರೆ ಹಿಂದುವಳಿದ ವರ್ಗ ಸೇರಿದಂತೆ ಸಾಮಾನ್ಯರಿಗೂ ವಿಸ್ತರಿಸಬೇಕು. ಸಂಸದರು ಕಸ್ತೂರಿರಂಗನ್ ವರದಿ ಮತ್ತು ಅರಣ್ಯಭೂಮಿ ಅತಿಕ್ರಮಣ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿ ಸಮಸ್ಯೆ ಬಗೆಹರಿಸಬೇಕು ಎಂದರು.

ಅತಿಕ್ರಮಣ ಹೋರಾಟ ಸಮಿತಿಯಿಂದ ರಾಜ್ಯದ ಎಲ್ಲ ಸಂಸದರನ್ನು ಭೇಟಿಯಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಲಾಗುವುದು ಎಂದು ರಾಮಾ ಮೊಗೇರ ಹೇಳಿದರು.

ಈ ಸಂದರ್ಭದಲ್ಲಿ ಅತಿಕ್ರಮಣ ಹೋರಾಟ ಸಮಿತಿಯ ಪ್ರಮುಖರಾದ ರಿಜ್ವಾನ್, ಖಯ್ಯೂಂ ಕೋಲಾ, ಸಯೀದ್ ಝಮೀರ್ ಜಾಲಿ ಮುಂತಾದವರಿದ್ದರು. ಅತಿಕ್ರಮಣದಾರರ ಸಮಸ್ಯೆ ಇತ್ಯರ್ಥಕ್ಕೆ ಕಾಗೇರಿ ಯತ್ನಿಸಲಿ

ಸಿದ್ದಾಪುರ: ಜಿಲ್ಲೆಯ ಅತಿಕ್ರಮಣದಾರರಿಗೆ ಹಕ್ಕು ಕೊಡಿಸುವ ಸಲುವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಬಡವರಿಗೆ ಹಕ್ಕುಪತ್ರ ದೊರೆಯಲು ಗಮನಹರಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ತಾಲೂಕಿನ ಇಟಗಿ ಗ್ರಾಪಂ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಅತಿಕ್ರಮಣದಾರರಿಗೆ ಹಕ್ಕುಪತ್ರದ ಕುರಿತಂತೆ ರಾಜ್ಯ ಸರ್ಕಾರ ೭೫ ವರ್ಷದ ದಾಖಲೆ ಬದಲಾಗಿ ೨೫ ವರ್ಷಕ್ಕೆ ಸೀಮಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಈ ಬಗ್ಗೆ ರಾಜ್ಯದ ಸಂಸದರು ಇಚ್ಛಾಶಕ್ತಿ ತೋರಿಸಬೇಕು. ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕಾರಣ ನಿಯಮದಲ್ಲಿ ಸರಳೀಕರಣ ತಂದು ಹಕ್ಕುಪತ್ರ ಕೊಡಿಸಲು ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಅಡಕೆಗೆ ದಿನಕ್ಕೊಂದು ರೋಗ ಬಾಧಿಸುತ್ತಿದೆ. ರಾಜ್ಯದ ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ಹೊರದೇಶದ ಅಡಕೆ ಆಮದಿಗೆ ಮುಕ್ತ ಅವಕಾಶ ನೀಡಿದೆ. ಈ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತದಿದ್ದರೆ ರೈತರ ಸ್ಥಿತಿ ಚಿಂತಾಜನಕವಾಗುತ್ತದೆ ಎಂದರು.ಸಾರ್ವಜನಿಕರು ಆಗಾಗ ಗ್ರಾಪಂಗೆ ಭೇಟಿ ನೀಡಿ ಸರ್ಕಾರದ ಸೌಲಭ್ಯ ಹಾಗೂ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಪಂಚಾಯಿತಿಗೆ ಬರುವ ಜನರಿಗೆ ಜನಪ್ರತಿನಿಧಿಗಳು, ಸಿಬ್ಬಂದಿ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.