ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಾರ್ಯಾಲಯ ಹಾಗೂ ಗೋಡೌನ್ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿಸುವಂತೆ ಆಗ್ರಹಿಸಿ ಸಂಘದ ಅಧ್ಯಕ್ಷ ವಿಶ್ವಾನಾಥ ಕಪ್ಪತ್ತನವರ ನೇತೃತ್ವದಲ್ಲಿ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿಗೆ ಹುಬ್ಬಳ್ಳಿಯ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಮಾತನಾಡಿ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವು ೨೦೨೦-೨೧ನೇ ಸಾಲಿನಲ್ಲಿ ಪುನಶ್ಚೇತನಗೊಂಡಿದ್ದು, ಇದರ ಕಾರ್ಯಾಲಯದ ಹಾಗೂ ಗೋಡೌನ ಕಟ್ಟಡವು ೪೦೪ ಚಮೀ ವಿಸ್ತಿರ್ಣದಲ್ಲಿದ್ದು, ಸುಮಾರು ೬೦-೭೦ ವರ್ಷಗಳ ಹಳೆಯ ಕಟ್ಟಡವಾಗಿದೆ. ಶಿಥಿಲಾವಸ್ಥೆಯಲ್ಲಿರುವ ಹಾಗೂ ಕಳೆದ ೨೦೨೨ರಲ್ಲಿ ಸುರಿದ ಭಾರೀ ಮಳೆಗೆ ಪೂರ್ಣ ಶಿಥಿಲಗೊಂಡಿದೆ. ಸದ್ಯ ಸಹಕಾರಿ ಸಂಘದ ಕಾರ್ಯಚಟುವಟಿಕೆಗಳೆಲ್ಲವೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯ ಸಂಘಕ್ಕೆ ಬೀಜ, ಗೊಬ್ಬರ, ಕ್ರಿಮಿನಾಶಕ ಮಾರಾಟ ಮಾಡಲು ಪರವಾನಗಿ ದೊರೆತಿದೆ.ಅಲ್ಲದೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು, ಕಡಲೆ ಖರೀದಿಸಲು ಆದೇಶ ದೊರೆತಿದೆ. ಜತೆಗೆ ಪಡಿತರ ವಿತರಣೆ ಪ್ರಾಧಿಕಾರ ದೊರೆತಿದೆ ಎಂದರು.ಈ ಎಲ್ಲ ಕೆಲಸ ಕಾರ್ಯ ನಿಭಾಯಿಸಲು ಗೋಡೌನ್ ಕಟ್ಟಡದ ಅವಶ್ಯಕತೆ ಇದೆ. ಸದ್ಯ ಕಟ್ಟಡದ ಬಾಡಿಗೆ,ಸಿಬ್ಬಂದಿಗಳ ವೇತನ ಭರಿಸುವುದು ಸಂಘಕ್ಕೆ ಆರ್ಥಿಕವಾಗಿ ತುಂಭಾ ಕಷ್ಟದ ವಿಷಯವಾಗಿದೆ. ಗೋಡೌನ್ ಕಟ್ಟಡ, ಕಾರ್ಯಾಲಯ ಪುನರ್ ನಿರ್ಮಾಣ ಪ್ರಾರಂಭವಾಗಿದ್ದು, ಸದ್ಯ ಕಟ್ಟಡವು ಆರ್‌ಸಿಸಿ ಹಂತದ ವರೆಗೆ ಬಂದಿದ್ದು, ಮುಂದಿನ ಕೆಲಸ ಪ್ರಾರಂಭಿಸಲು ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ₹೨೦ ಲಕ್ಷಗಳ ಅನುದಾನ ಮಂಜೂರ ಮಾಡಿ ಸಂಘಕ್ಕೆ ಅನುಕೂಲ ಮಾಡಿಕೊಡಬೇಕೆಂದು ಲಿಖಿತ ಮನವಿ ಸಲ್ಲಿಸಿ
ಮನವಿ ಪತ್ರದ ಜತೆಗೆ ನಿವೇಶನದ ಉತಾರ,ಕಟ್ಟಡದ ಪೋಟೊ, ಕಟ್ಟಡ ಕಟ್ಟಲು ಪಡೆದ ಪರವಾನಗಿ ಪೋಟೊ ಲಗತ್ತಿಸಿ ವಿನಂತಿಸಿಕೊಂಡರು.ಮುಖಂಡ ಚಂದ್ರಕಾಂತ ನೂರಶೆಟ್ಟರ್, ಸಹಕಾರಿ ಸಂಘದ ಉಪಾಧ್ಯಕ್ಷ ಎಸ್.ಎ. ನಂದಿಬೇವೂರಮಠ, ನಿರ್ದೇಶಕ ಎಲ್.ಡಿ. ಪಾಟೀಲ, ಬಿ.ಎಚ್. ಭರಮಣ್ಣವರ, ಎಸ್.ಜೆ. ಕಪ್ಪತ್ತನವರ, ಸಿ.ಎಚ್. ತಳವಾರ, ಎನ್.ಸಿ.ಲಕ್ಕುಂಡಿ, ಎಸ್.ಎಸ್. ಮಹಾಜನಶೆಟ್ಟರ, ಪಿ.ಎಫ್. ಅಕ್ಕಿ, ಪಿ.ವಿ. ಹೊನಗಣ್ಣರ, ಕೆ.ಎಸ್.ಸಜ್ಜನರ, ಎಸ್.ಎನ್. ಗಾಣಿಗೇರ ಸೇರಿ ಅನೇಕರು ಇದ್ದರು.