ಸಾರಾಂಶ
ಶಿರಸಿ: ಕುಣಬಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿ, ಕುಣಬಿ ಸಮಾಜದ ವತಿಯಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.ರಾಜ್ಯ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಣಬಿಗಳು ಕಾಡು, ಪರಿಸರ, ಜಲ, ನೆಲ, ನದಿಮೂಲ, ಕಾಡಿನ ಕಿರು ಉತ್ಪನ್ನ ಗಿಡಮೂಲಿಕೆ ಜ್ಞಾನ, ಗೆಡ್ಡೆ ಗೆಣಸು, ಕಾಡು ದೇವರೆಂದು ಪೂಜಿಸಿ, ಕುಮರಿ ಜಮೀನು ಸಾಗುವಳಿ ಮಾಡಿಕೊಂಡು ತಲೆತಲಾಂತರದಿಂದ ಬುಡಕಟ್ಟು ಸಂಸ್ಕೃತಿಯಲ್ಲಿ ಕಾಡಿನ ಮಧ್ಯೆ ವಾಸ ಮಾಡಿಕೊಂಡು ಬಂದಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾದ ಎಲ್ಲ ಗುಣಲಕ್ಷಣಗಳಿರುವ ಕುಣಬಿಗಳಾದ ನಮ್ಮನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸಬೇಕೆಂದು ಅನೇಕ ಸಲ ರಾಸ್ತಾರೋಖ, ಸೈಕಲ್ ಜಾಥಾ, ಉಪವಾಸ ಸತ್ಯಾಗ್ರಹ ಮಾಡುತ್ತಾ ಬಂದರೂ ಕಳೆದ ೨೫ ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಮನ್ನಣೆ ಸಿಕ್ಕಿಲ್ಲ. ೨೦೦೩ರಲ್ಲಿ ನೆರೆಯ ಗೋವಾದಲ್ಲಿ ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ.ಗೋವಾ ಕುಣಬಿಗಳಿಗೂ ಮತ್ತು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕುಣಬಿಗಳಿಗೆ ದೇವರು, ಮದುವೆ, ಆಚಾರ ವಿಚಾರ ಸೇರಿದಂತೆ ಎಲ್ಲ ದೃಷ್ಟಿಯಲ್ಲೂ ಅವಿನಾಭಾವ ಸಂಬಂಧ ಇದೆ. ರಾಜ್ಯಗಳ ಗಡಿರೇಖೆ ನಮ್ಮನ್ನು ಇಬ್ಭಾಗ ಮಾಡಿದೆ. ಆದರೆ ನಮ್ಮ ರಾಜ್ಯದಲ್ಲಿ ಕುಣಬಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿಲ್ಲ.
ಕೂಡಲೇ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳುವಂತೆ ಅಗ್ರಹಿಸಬೇಕು ಮತ್ತು ಬಡ ಕುಣಬಿಗಳಿಗೆ ಪರಿಶಿಷ್ಟ ಪಂಗಡದ ಸ್ಥಾನ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮನವಿ ಸಲ್ಲಿಸುವ ವೇಳೆ ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ, ಪ್ರಮುಖರಾದ ಪ್ರೇಮಾನಂದ ವೇಳಿಪ, ಕೃಷ್ಣ ಮಿರಾಶಿ, ಚಂದ್ರಶೇಖರ ಸಾವರಕರ, ದಯಾನಂದ ಕುಮಗಾಳಕರ, ಪ್ರಭಾಕರ ವೇಳಿಪ, ಪರಮೇಶ್ವರ ಕುಣಬಿ, ನಾರಾಯಣ ಕುಣಬಿ, ಪುಟ್ಟಾ ಕುಣಬಿ, ಚಂದ್ರಶೇಖರ ಕುಣಬಿ, ಮಹೇಶ್ ಕುಣಬಿ, ರವಿ ಕುಣಬಿ, ಬಾಲಚಂದ್ರ ಕುಣಬಿ, ಪರಮೇಶ್ವರ ಗೌಡ, ಸದಾನಂದ ಗೌಡ, ಉಮೇಶ್ ಗೌಡ, ಮಹಾಬಲೇಶ್ವರ ಗೌಡ ಮತ್ತಿತರರು ಇದ್ದರು. ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಲ್ಲಾಪುರ: ಶಿರಸಿಯ ಮಾರಿಕಾಂಬಾ ತಾಲೂಕು ಕ್ರೀಡಾಂಗಣದಲ್ಲಿ ಅ. ೨೯ರಂದು ನಡೆದ ೨೦೨೪- ೨೫ನೇ ಸಾಲಿನ ೧೭ ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ, ನವೆಂಬರ್‌ನಲ್ಲಿ ಕೋಲಾರದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ವೈಯಕ್ತಿಕ ವಿಭಾಗದಲ್ಲಿ ನವೀನ್ ನರಸಿಂಹ ಸಿದ್ದಿ ಎತ್ತರ ಜಿಗಿತ ಪ್ರಥಮ ಹಾಗೂ ೫ ಕಿಮೀ ನಡಿಗೆಯಲ್ಲಿ ದ್ವಿತೀಯ, ಸಂಕೇತ ಈಶ್ವರ ನಾಯ್ಕ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸದಸ್ಯರು, ಪ್ರೌಢಶಾಲಾ ಮುಖ್ಯಾಧ್ಯಾಪಕರು ಮತ್ತು ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ನಾಯ್ಕ ತರಬೇತಿ ನೀಡಿದ್ದರು.