ಅಕ್ರಮ ಭೂ ಕಬಳಿಕೆ ತಡೆಗೆ ಮನವಿ

| Published : Jun 30 2024, 12:46 AM IST

ಸಾರಾಂಶ

ಅಕ್ರಮ ಭೂ ಕಬಳಿಕೆ ತಡೆಯಬೇಕೆಂದು ಒತ್ತಾಯಿಸಿ ಹಿರಿಯೂರು ನಗರದ ತಹಸೀಲ್ದಾರ್ ಕಚೇರಿಗೆ 30ನೇ ವಾರ್ಡ್ ನಿವಾಸಿಗಳಿಂದ ಮನವಿ ಪತ್ರ ಸಲ್ಲಿಕೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರ ವ್ಯಾಪ್ತಿಯ ನಂ.83ರಲ್ಲಿ ಅಕ್ರಮ ಭೂ ಕಬಳಿಕೆ ಮಾಡಿಕೊಂಡು ವಾಣಿಜ್ಯ ಮಳಿಗೆ, ಮನೆ ನಿರ್ಮಾಣ ಮಾಡಲಾಗುತ್ತಿದ್ದು, ಜಮೀನನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಸಿಕೊಳ್ಳಿ ಎಂದು ಶ್ರೀ ಹರ್ಷವರ್ಧನ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೊಸೈಟಿಯಿಂದ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಮನವಿ ನೀಡಿ ಸೊಸೈಟಿ ಕಾರ್ಯದರ್ಶಿ ಸಿದ್ದಗಂಗಮ್ಮ ಮಾತನಾಡಿ, ನಗರ ವ್ಯಾಪ್ತಿ ಈ ಜಾಗದಲ್ಲಿ ಬಡ ದಲಿತ ಕುಟುಂಬ ವಾಸ ಮಾಡುತ್ತಿದ್ದು, ಇದುವರೆಗೂ ಇಲ್ಲಿಗೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಆದರೆ, ಇತ್ತೀಚೆಗೆ ಭೂ ಪ್ರದೇಶದಲ್ಲಿ ವಾಸ ಮಾಡುತ್ತಿರುವವರ ಗುಡಿಸಲು ಜೆಸಿಬಿ ಬಳಸಿ ತೆರವುಗೊಳಿಸಲು ಕೆಲವು ಖಾಸಗಿ ವ್ಯಕ್ತಿಗಳು ಮುಂದಾಗಿದ್ದು, ಅವರನ್ನು ಪ್ರಶ್ನೆ ಮಾಡಿದರೆ ಇದು ಮಾರುತಜ್ಜ ಬಿನ್ ಮಾರಪ್ಪ ಎಂಬುವವರಿಗೆ ಸೇರಿದೆ. ನಾವು ಮಾರುತಜ್ಜ ವ್ಯಕ್ತಿಯ ವಂಶಸ್ಥರು ಎಂಬ ಉತ್ತರ ಬರುತ್ತಿದೆ. ಈ ಜಾಗಕ್ಕೆ ನಗರಸಭೆಯಲ್ಲೂ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಕಂದಾಯ ಇಲಾಖೆ ನೀಡಿದ ಮಾಹಿತಿಯಲ್ಲಿ ಎಲ್ಲಿಯೂ ಮಾರುತಜ್ಜ ಬಿನ್ ಮಾರಪ್ಪ ಎನ್ನುವವರಿಗೆ ಭೂಮಿ ನೀಡಿದ ಉಲ್ಲೇಖಗಳಿಲ್ಲ. ಗಣಕಿಕೃತ ಪಹಣಿಯಲ್ಲಿ ಮಾತ್ರ 2 ಎಕರೆ ಮಾರುತಜ್ಜ ಬಡಾವಣೆ ಎಂದು ಬರುತ್ತಿದ್ದು ಈ ಬಡಾವಣೆ ಹಕ್ಕು ಋಣಗಳು ಜಿಲ್ಲಾಧಿಕಾರಿಗಳ ಅಧೀನದಲ್ಲಿವೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿನ ಜನರ ದೌರ್ಬಲ್ಯ ಬಳಸಿಕೊಂಡು ನಕಲಿ ಹಕ್ಕುಪತ್ರ ತಯಾರಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇದೀಗ ಬಹಳಷ್ಟು ವರ್ಷಗಳಿಂದ ಇಲ್ಲಿಯೇ ನೆಲೆಸಿರುವ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಸಂಚು ನಡೆದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ 2 ಎಕರೆ ಭೂ ಪ್ರದೇಶವನ್ನು ನಗರಸಭೆ ವ್ಯಾಪ್ತಿಗೆ ಪಡೆದು ಬಡ ನಿರಾಶ್ರಿತರಿಗೆ ಹಂಚಿ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಶಾಂತಮ್ಮ, ರಂಗಜ್ಜಿ, ಗಣೇಶ್, ವಿಷ್ಣು, ಗೌರಮ್ಮ, ಬಸವರಾಜ್, ಪ್ರೇಮ, ಗಂಗಣ್ಣ, ಗಾಡಿ ಗಂಗಣ್ಣ, ಗಂಗಮ್ಮ, ಮಂಜುಳಾ, ಆರ್ ಗೌರಮ್ಮ, ಟಿ ರೇಣುಕಾ, ನಾಗವೇಣಿ, ಲಕ್ಷ್ಮಿಕಾಂತ, ಚಂದ್ರಣ್ಣ, ವಿನೋದಮ್ಮ, ರುದ್ರಪ್ಪ, ರಾಧಮ್ಮ, ದ್ಯಾಮಣ್ಣ, ಲಕ್ಷ್ಮಕ್ಕ, ಒಬಳಮ್ಮ ವರದಪ್ಪ, ಲಿಂಗರಾಜು, ಅಶ್ವಿತಾ ಇದ್ದರು.